ಪರಿಷತ್ ಚುನಾವಣೆ; ಕಾಂಗ್ರೆಸ್ ಅಭ್ಯರ್ಥಿ ಬೆಂಬಲಕ್ಕೆ ಲಿಂಗಾಯತ ಸ್ವಾಮೀಜಿಗಳು?  

ಪರಿಷತ್ ಚುನಾವಣೆ; ಕಾಂಗ್ರೆಸ್ ಅಭ್ಯರ್ಥಿ ಬೆಂಬಲಕ್ಕೆ ಲಿಂಗಾಯತ ಸ್ವಾಮೀಜಿಗಳು?   

 

ಬೆಳಗಾವಿ: ಜಿಲ್ಲೆಯಲ್ಲಿ ವಿಧಾನ ಪರಿಷತ್ ಚುನಾವಣೆ ದಿನದಿಂದ ದಿನಕ್ಕೆ ರಂಗು ಪಡೆಯುತ್ತಿದ್ದು, ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿ ಬೆಂಬಲಕ್ಕೆ ಈಗ ಲಿಂಗಾಯತ ಸ್ವಾಮೀಜಿಗಳು ನಿಂತಿದ್ದಾರೆ ಎನ್ನುವ ಸುದ್ದಿಗಳು ದಟ್ಟವಾಗಿ ಕೇಳಿ ಬರುತ್ತಿವೆ. ಲಿಂಗಾಯತ ಸಮುದಾಯಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ ಕೇಳಿ ನಡೆಯುತ್ತಿರುವ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಸ್ವಾಮೀಜಿಯೊಬ್ಬರು ಜಿಲ್ಲೆಯಲ್ಲಿನ ಲಿಂಗಾಯತ ಮುಖಂಡರಿಗೆ ಕರೆ ಮಾಡಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರ ಸಹೋದರ ಚನ್ನರಾಜ ಹಟ್ಟಹೊಳಿ ಅವರನ್ನು ಬೆಂಬಲಿಸುವಂತೆ ಕೋರುತ್ತಿದ್ದಾರೆ ಎನ್ನಲಾಗಿದೆ.

 

ಇಂದು ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಹಿರೇಬಾಗೇವಾಡಿಯಲ್ಲಿ ಪ್ರಚಾರ ನಡೆಸಿದರು. ಪ್ರಚಾರ ಸಭೆಯಲ್ಲಿ ಮಾತನಾಡಿದ ಡಿಸಿಸಿ ಬ್ಯಾಂಕ್ ನಿರ್ದೇಶಕ ರಾಜು ಅಂಕಲಗಿ, ‘ಕೂಡಲಸಂಗಮದ ಸ್ವಾಮೀಜಿ ಒಬ್ಬರು ತಮಗೆ ಕರೆ ಮಾಡಿ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಕೇಳಿಕೊಂಡರು. ಆದರೆ ಅವರಿಗೆ ತಾವು ಬುದ್ದಿ ಹೇಳಿ ನೀವು ಧರ್ಮದ ಕೆಲಸ ಅಷ್ಟೇ ಮಾಡಿ. ರಾಜಕಾರಣ ಮಾಡಬೇಡಿ. ರಾಜಕಾರಣ ಮಾಡುವುದಿದ್ದರೆ ಕಾವಿ ಕಳಚಿ ಖಾದಿ ಧರಿಸಿ ಅಖಾಡಾಕ್ಕೆ ಬನ್ನಿ’ ಎಂದು ಆಹ್ವಾನ ನೀಡಿದೆ ಎಂದು ಬಹಿರಂಗ ಸಭೆಯಲ್ಲಿ ಹೇಳಿಕೊಂಡರು. ರಾಜು ಅಂಕಲಗಿ ಬಹಿರಂಗಪಡಿಸಿದ ಸಂಗತಿ ಬಿಜೆಪಿಯಲ್ಲಿ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.

 

ಲಿಂಗಾಯತ ಸಮುದಾಯಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ ನೀಡುವ ಪ್ರಸ್ತಾಪವನ್ನು ಕೇಂದ್ರದ ಬಿಜೆಪಿ ಸರ್ಕಾರ ಈಗಾಗಲೇ ತಳ್ಳಿ ಹಾಕಿದೆ. ಆದರೆ, ಬೇಡಿಕೆಯ ಹೋರಾಟ ನಿಂತಿಲ್ಲ. ಕೊರೊನಾ ಹಾಗೂ ಇನ್ನಿತರೆ ಕಾರಣಗಳಿಂದಾಗಿ ಹೋರಾಟ ಕಳೆದ ಎರಡು ವರ್ಷಗಳಿಂದ ತಣ್ಣಗಾಗಿದೆ. ವಾರದ ದಿನಗಳ ಹಿಂದಷ್ಟೇ ಜಾಗತಿಕ ಲಿಂಗಾಯತ ಮಹಾಸಭಾದ ಮುಖ್ಯ ಕಚೇರಿಯನ್ನು ಬೆಂಗಳೂರಿನಿಂದ ಬೆಳಗಾವಿಗೆ ಶಿಫ್ಟ್ ಮಾಡಲಾಗಿದ್ದು, ಬೆಳಗಾವಿಯಿಂದಲೇ ಉತ್ತರ ಕರ್ನಾಟಕದ ತುಂಬೆಲ್ಲ ಹೋರಾಟವನ್ನು ಇನ್ನಷ್ಟು ಗಟ್ಟಿಗೊಳಿಸಲು ಹಲವಾರು ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ಕೆಲವು ಲಿಂಗಾಯತ ಸ್ವಾಮೀಜಿಗಳು ಬಹಿರಂಗವಾಗಿ ಈ ಹೋರಾಟದ ಪರವಾಗಿ ನಿಂತಿದ್ದರೆ, ಕೆಲವರು ಸ್ಥಳೀಯ ಕಾರಣಗಳಿಗಾಗಿ ತೆರೆಮರೆಯಲ್ಲಿಯೇ ಬೆಂಬಲ ನೀಡುತ್ತಿದ್ದಾರೆ.

 

ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಮೊದಲಿನಿಂದಲೂ ಲಿಂಗಾಯತ ಹೋರಾಟದ ಪರವಾಗಿ ನಿಂತಿದ್ದು, ಅದರಿಂದ ಈಗ ಅವರಿಗೆ ಲಾಭವಾಗುವ ಲಕ್ಷಣಗಳು ಕಾಣುತ್ತಿವೆ. ಹೆಬ್ಬಾಳಕರ ಸಹೋದರ ಚನ್ನರಾಜ ಹಟ್ಟಿಹೊಳಿ ಈಗ ಪರಿಷತ್ ಚುನಾವಣಾ ಕಣದಲ್ಲಿದ್ದು, ಲಿಂಗಾಯತ ಹೋರಾಟದ ಪರವಾಗಿರುವ ಕೆಲವು ಸ್ವಾಮೀಜಿಗಳು ಮತ್ತು ಹಲವಾರು ಮುಖಂಡರು ಪಕ್ಷಭೇದ ಮರೆತು ಅವರ ಬೆಂಬಲಕ್ಕೆ ನಿಲ್ಲುತ್ತಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಕೆಲವು ಮುಖಂಡರು ಬೇರೆ ಬೇರೆ ವೇದಿಕೆಗಳಲ್ಲಿ ಅದನ್ನು ಬಹಿರಂಗಪಡಿಸುತ್ತಿದ್ದಾರೆ.

 

ಬೆಳಗಾವಿಯಿಂದ ಪರಿಷತ್ ಕಣದಲ್ಲಿರುವ ಪ್ರಮುಖ ಮೂರು ಅಭ್ಯರ್ಥಿಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿ ಬಹುಸಂಖ್ಯಾತ ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಬಿಜೆಪಿಯಿಂದ ವೀರಶೈವ ಲಿಂಗಾಯತ ಸಮುದಾಯದ ಮಹಾಂತೇಶ ಕವಟಗಿಮಠ ಮೂರನೇ ಬಾರಿಗೆ ಸ್ಪರ್ಧಿಸಿ ಕಣದಲ್ಲಿದ್ದಾರೆ. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಲಖನ್ ಜಾರಕಿಹೊಳಿ ಅವರು ಪರಿಶಿಷ್ಠ ಪಂಗಡಕ್ಕೆ ಸೇರಿದ್ದಾರೆ.

 

ಪರಿಷತ್ ಚುನಾವಣೆಯಲ್ಲಿ ಹಣಬಲ ಮತ್ತು ಸಂಘಟನಾಬಲ ಪ್ರಮುಖವಾಗಿ ಕೆಲಸ ಮಾಡುತ್ತವೆ ಎಂದು ಇಲ್ಲಿಯವರೆಗೆ ಹೇಳಲಾಗುತ್ತಿತ್ತು. ಏಕೆಂದರೆ ಹಿಂದಿನ ಚುನಾವಣೆಗಳೂ ಇದೇ ಆಧಾರದಲ್ಲಿ ನಡೆದಿವೆ. ಆದರೆ ಈ ಬಾರಿ ಹಣಬಲ, ಸಂಘಟನಾಬಲದ ಜೊತೆಗೆ ಜಾತಿಬಲವೂ ಪ್ರಮುಖವಾಗಿ ಕೆಲಸ ಮಾಡುತ್ತಿದ್ದು, ಚುನಾವಣೆಯಲ್ಲಿ ಯಾವ ಯಾವ ಅಂಶಗಳು ಎಷ್ಟು ಪ್ರಭಾವ ಬೀರಿವೆ ಎನ್ನುವುದು ಡಿಸೆಂಬರ್ 14 ರಂದು ಬರುವ ಫಲಿತಾಂಶದಿಂದ ಗೊತ್ತಾಗಲಿದೆ.