ಹ್ಯಾಟ್ರಿಕ್ ನಲ್ಲಿ ಮುಗ್ಗರಿಸಿದ ಮಹಾಂತೇಶ ಕವಟಗಿಮಠ; ಚನ್ನರಾಜ ಹಟ್ಟಿಹೊಳಿ, ಲಖನ್ ಜಾರಕಿಹೊಳಿಗೆ ಮಣೆ ಹಾಕಿದ ಮತದಾರರು

ಹ್ಯಾಟ್ರಿಕ್ ನಲ್ಲಿ ಮುಗ್ಗರಿಸಿದ ಮಹಾಂತೇಶ ಕವಟಗಿಮಠ; ಚನ್ನರಾಜ ಹಟ್ಟಿಹೊಳಿ, ಲಖನ್ ಜಾರಕಿಹೊಳಿಗೆ ಮಣೆ ಹಾಕಿದ ಮತದಾರರು

ಬೆಳಗಾವಿ: ಜಿದ್ದಾಜಿದ್ದಿನ ಕಣವಾಗಿದ್ದ ಬೆಳಗಾವಿ ಜಿಲ್ಲೆಯ ವಿಧಾನ ಪರಿಷತ್ತಿನ ಎರಡು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ನಿರೀಕ್ಷೆಯಂತೆ ಕಾಂಗ್ರೆಸ್ ಭರ್ಜರಿ ಜಯ ದಾಖಲಿಸಿದೆ. ಮೂರನೇ ಬಾರಿ ಪಕ್ಷದ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದ ಮಹಾಂತೇಶ ಕವಟಗಿಮಠ ಹ್ಯಾಟ್ರಿಕ್ ನಲ್ಲಿ ಮುಗ್ಗರಿಸಿದ್ದು, ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಗೆಲುವು ಸಾಧಿಸಿದ್ದಾರೆ.

 

ಜಿಲ್ಲೆಯಲ್ಲಿ ಎರಡು ಸ್ಥಾನಗಳಿದ್ದರೂ ಬಿಜೆಪಿ ಮತ್ತು ಕಾಂಗ್ರೆಸ್ ರಕ್ಷಣಾತ್ಮಕ ಆಟವಾಗಿ ಕೇವಲ ಒಂದೊಂದು ಅಭ್ಯರ್ಥಿಯನ್ನು ಮಾತ್ರ ಕಣಕ್ಕಿಳಿಸಿದ್ದವು. ಆದರೆ ಕೊನೆಯ ಕ್ಷಣದಲ್ಲಿ ಬಿಜೆಪಿ ಜೊತೆ ಗುರುತಿಸಿಕೊಂಡಿದ್ದ ಲಖನ್ ಜಾರಕಿಹೊಳಿ ಪಕ್ಷೇತರರಾಗಿ ಕಣಕ್ಕೆ ಇಳಿದಿದ್ದರಿಂದ ಬಿಜೆಪಿಯ ಆಟ ಕೆಟ್ಟಿತು. ಖುದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಜಿಲ್ಲೆಯ ಎಲ್ಲ 13 ಬಿಜೆಪಿ ಶಾಸಕರೊಂದಿಗೆ ಪ್ರತ್ಯೇಕ ಸಭೆ ನಡೆಸಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಬೇಕೆಂದು ಕಟ್ಟುನಿಟ್ಟಾಗಿ ಹೇಳಿದ್ದರೂ, ಅವರ ಮಾತನ್ನು ಯಾರೂ ಗಂಭೀರವಾಗಿ ಪರಿಗಣಿಸದಿರುವುದು ಬಿಜೆಪಿ ಅಭ್ಯರ್ಥಿ ಪಡೆದಿರುವ ಮತಗಳಿಂದ ಗೊತ್ತಾಗುತ್ತದೆ.

 

ಲಖನ್ ಜಾರಕಿಹೊಳಿ ಪಕ್ಷೇತರರಾಗಿ ಕಣಕ್ಕೆ ಇಳಿದ ಬಳಿಕ ಬಿಜೆಪಿಯಲ್ಲಿ ಗೊಂದಲ ಶುರುವಾಗಿತ್ತು. ಕೆಲವು ನಾಯಕರು ಮತ್ತು ಶಾಸಕರು ಬಹಿರಂಗವಾಗಿಯೇ ಲಖನ್ ಪರವಾಗಿ ಪ್ರಚಾರ ನಡೆಸಿದ್ದರು. ಇನ್ನು ಕೆಲವರು ಬಿಜೆಪಿ ಅಭ್ಯರ್ಥಿಗೆ ಪ್ರಥಮ ಪ್ರಾಶಸ್ತ್ಯದ ಮತ ಮತ್ತು ಪಕ್ಷೇತರ ಅಭ್ಯರ್ಥಿ ಲಖನ್ ಗೆ ಎರಡನೇ ಪ್ರಾಶಸ್ತ್ಯದ ಮತ ನೀಡುವಂತೆ ಪ್ರಚಾರ ಮಾಡಿದ್ದರು. ಬಹಿರಂಗವಾಗಿ ಬಹುತೇಕರು ಬಿಜೆಪಿ ಅಭ್ಯರ್ಥಿ ಕವಟಗಿಮಠ ಪರವಾಗಿ ತೋರ್ಪಡಿಸಿಕೊಂಡರೂ ಒಳಗಿಂದೊಳಗೆ ಲಖನ್ ಪರವಾಗಿ ಕೆಲಸ ಮಾಡುತ್ತಿದ್ದರು. ಇದೆಲ್ಲದರ ಫಲವಾಗಿ ಬಿಜೆಪಿ ಅಭ್ಯರ್ಥಿ ಸೋಲು ಕಂಡಿದ್ದಾರೆ. ಲಖನ್ ಜಾರಕಿಹೊಳಿ ಆಯ್ಕೆಯಾಗುವ ಮೂಲಕ ಜಾರಕಿಹೊಳಿ ಕುಟುಂಬದ ಐವರು ಸಹೋದರರಲ್ಲಿ ನಾಲ್ವರು ವಿಧಾನಸೌಧವನ್ನು ಪ್ರವೇಶಿಸಿದಂತಾಗಿದೆ.

 

ಬಿಜೆಪಿಯಲ್ಲಿದ್ದಂತೆ ಗೊಂದಲ ಮೊದಲಿನಿಂದಲೂ ಕಾಂಗ್ರೆಸ್ ನಲ್ಲಿ ಇರಲಿಲ್ಲ. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ನೇತೃತ್ವದಲ್ಲಿ ಪಕ್ಷ ಚುನಾವಣೆಯನ್ನು ಎದುರಿಸಿತ್ತು. ಎಲ್ಲ ಮುಖಂಡರ ಒಮ್ಮತದ ಅಭ್ಯರ್ಥಿಯಾಗಿ ಲಕ್ಷ್ಮೀ ಹೆಬ್ಬಾಳಕರ ಸಹೋದರ ಚನ್ನರಾಜ ಹಟ್ಟಿಹೊಳಿ ಆಯ್ಕೆಯಾಗಿದ್ದರು. ಕೆಪಿಸಿಸಿ ಆಧ್ಯಕ್ಷ ಡಿಕೆ ಶಿವಕುಮಾರ ಸುಮಾರು ಎರಡು ಬಾರಿ ಜಿಲ್ಲೆಗೆ ಭೇಟಿ ನೀಡಿ ಮೂರು ದಿನಗಳ ಕಾಲ ಅಭ್ಯರ್ಥಿಯ ಗೆಲುವಿಗಾಗಿ ತಂತ್ರಗಾರಿಕೆ ಹೆಣೆದಿದ್ದರು. ವಿಪಕ್ಷ ನಾಯಕ ಸಿದ್ಧರಾಮಯ್ಯ ಕೂಡ ಜಿಲ್ಲೆಗೆ ಆಗಮಿಸಿ ಪ್ರಚಾರ ನಡೆಸಿದ್ದರು. ಇದೆಲ್ಲದರ ಫಲವಾಗಿ ಕಾಂಗ್ರೆಸ್ ಭರ್ಜರಿ ಜಯ ದಾಖಲಿಸಿದೆ.

 

ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿ 3,431 ಮತಗಳನ್ನು ಪಡೆದು ಜಯ ದಾಖಲಿಸಿದ್ದಾರೆ. ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ 2,412 ಮತಗಳೊಂದಿಗೆ ಜಯ ಗಳಿಸಿದ್ದರೆ ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ 1,900 ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ. ಜಿಲ್ಲೆಯಲ್ಲಿ 13 ಶಾಸಕರಿದ್ದರೂ ಬಿಜೆಪಿ ತನ್ನ ಅಭ್ಯರ್ಥಿಯನ್ನು ಕಳೆದುಕೊಂಡಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ.