ರೋಗ ನಿರೋಧಕ ಶಕ್ತಿ ಕಡಿಮೆ‌ ಇರುವ ಮಕ್ಕಳಿಗಾಗಿ ರಾಜ್ಯ ಸರ್ಕಾರದಿಂದ‌ ಹೊಸ ಯೋಜನೆ

ರೋಗ ನಿರೋಧಕ ಶಕ್ತಿ ಕಡಿಮೆ‌ ಇರುವ ಮಕ್ಕಳಿಗಾಗಿ ರಾಜ್ಯ ಸರ್ಕಾರದಿಂದ‌ ಹೊಸ ಯೋಜನೆ
 
 
ಬೆಳಗಾವಿರೋಗ ನಿರೋಧಕ ಶಕ್ತಿ ಕಡಿಮೆ ಇರುವ ಮಕ್ಕಳಿಗೆ ವಿಶೇಷ ಆರೈಕೆ, ಚಿಕಿತ್ಸೆ ನೀಡಿ ಅವರನ್ನು ರಕ್ಷಿಸುವ ಸಲುವಾಗಿ ರಾಜ್ಯ ಸರ್ಕಾರ 'ಆರೋಗ್ಯ ನಂದನ' ಯೋಜನೆಯನ್ನು ಜಾರಿಗೊಳಿಸಲು ಮುಂದಾಗಿದೆ.
 
ಹೊಸ ಯೋಜನೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಮುಂದಿನ ವಾರ‌ ಉದ್ಧಾಟಿಸಲಿದ್ದಾರೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ‌ ತಿಳಿಸಿದ್ದಾರೆ.
 
ಯೋಜನೆಯ ಅಡಿ ರಾಜ್ಯದಲ್ಲಿನ ಒಂದೂವರೆ ಕೋಟಿ ಮಕ್ಕಳನ್ನು ತಪಾಸಣೆಗೆ ಒಳಪಡಿಸಲಾಗುವುದು. ಈಗಾಗಲೆ ತಪಾಸಣೆಗೆ ಒಳಪಡಿಸಲಾಗಿರುವ ಕೆಲವು ಮಕ್ಕಳಲ್ಲಿ  ಶ್ವಾಸಕೋಶದ ತೊಂದರೆ, ರಕ್ತಹೀನತೆ, ಮೂತ್ರಪಿಂಡದ ಸಮಸ್ಯೆ, ಅಪೌಷ್ಠಿಕತೆ ಕಂಡುಬಂದಿದೆ. ಹೀಗೆ ಗುರುತಿಸಿದ ಮಕ್ಕಳಿಗೆ ಅಗತ್ಯ ಚಿಕಿತ್ಸೆ ನೀಡಲು ಕ್ರಮ ವಹಿಸಲಾಗುವುದು ಎಂದು ಸಚಿವರು ತಿಳಿಸಿದರು.
 
ಶಾಲೆ ಆರಂಭ ಸಂಬಂಧ ಮಾರ್ಗಸೂಚಿ ಪ್ರಕಟಿಸಲಾಗಿದೆ.  ಶಿಕ್ಷಣ ಇಲಾಖೆ ಅದನ್ನು ಆಯಾ ಜಿಲ್ಲಾಡಳಿತಗಳಿಗೆ ನೀಡಿದೆ. ಮಕ್ಕಳ ಆರೋಗ್ಯ ಕಾಪಾಡುವುದರ ಜೊತೆಗೆ ಭವಿಷ್ಯ ರೂಪಿಸುವುದು ಕೂಡ ಮುಖ್ಯ. ಅದನ್ನು ಸಮರ್ಥವಾಗಿ ನಿಭಾಯಿಸಬೇಕಿದೆ. ಶಾಲಾ ಸಿಬ್ಬಂದಿಗೆ ಲಸಿಕೆಯನ್ನೂ ನೀಡಲಾಗಿದೆ. ಎಲ್ಲರ ಅಭಿಪ್ರಾಯ ಪಡೆದುಕೊಂಡೇ ಈ ಕ್ರಮವನ್ನು ಸರ್ಕಾರ ಕೈಗೊಂಡಿದೆ ಎಂದು ಅವರು ಹೇಳಿದರು.