ಓಮಿಕ್ರಾನ್ ತಪಾಸಣೆ; ಕರ್ನಾಟಕ-ಮಹಾರಾಷ್ಟ್ರ ಗಡಿಭಾಗದ ನಾಗರಿಕರಿಂದ ಸರ್ಕಾರದ ವಿರುದ್ಧ ಆಕ್ರೋಶ  

ಓಮಿಕ್ರಾನ್ ತಪಾಸಣೆ; ಕರ್ನಾಟಕ-ಮಹಾರಾಷ್ಟ್ರ ಗಡಿಭಾಗದ ನಾಗರಿಕರಿಂದ ಸರ್ಕಾರದ ವಿರುದ್ಧ ಆಕ್ರೋಶ   

 

ಬೆಳಗಾವಿ: ಓಮಿಕ್ರಾನ್ ಎನ್ನುವ ಕೊರೊನಾ ರೂಪಾಂತರಿ ಬಗ್ಗೆ ಈಗ ಎಲ್ಲೆಡೆ ಚರ್ಚೆಗಳು ನಡೆಯುತ್ತಿವೆ. ರೂಪಾಂತರಿ ಇನ್ನೂ ಭಾರತ ದೇಶವನ್ನೇ ಪ್ರವೇಶಿಸಿಲ್ಲ. ಆಗಲೇ ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿ ಹೈ ಅಲರ್ಟ್ ಘೋಷಿಸಿ, ಪ್ರಯಾಣಿಕರ ಸಹಜ ಓಡಾಟದ ಮೇಲೆ ನಿರ್ಬಂಧ ವಿಧಿಸಿರುವ ರಾಜ್ಯ ಸರ್ಕಾರದ ವಿರುದ್ಧ ಗಡಿಭಾಗದ ಗ್ರಾಮಗಳಲ್ಲಿನ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

 

ಸದ್ಯಕ್ಕೆ ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಕೊರೊನಾ ಏನೂ ಉಲ್ಭಣಗೊಂಡಿಲ್ಲ. ಓಮಿಕ್ರಾನ್ ದೇಶದಲ್ಲಿಯೇ ಇಲ್ಲ. ಆದರೂ ಧಿಡೀರನೆ ಕೊಗನೊಳ್ಳಿ ಚೆಕ್ ಪೋಸ್ಟ್ ಮತ್ತು ಬಾಚಿ ಚೆಕ್ ಪೋಸ್ಟ್ ನಲ್ಲಿ ಪೊಲೀಸರನ್ನು ಹೆಚ್ಚಿನ ಪ್ರಮಾಣದಲ್ಲಿ ನಿಯೋಜಿಸಿ, ಮಹಾರಾಷ್ಟ್ರದಿಂದ ಬರುವ ವಾಹನಗಳನ್ನು ತಡೆದು ಪ್ರತಿಯೊಬ್ಬರನ್ನೂ ತಪಾಸಣೆಗೆ ಒಳಪಡಿಸಲಾಗುತ್ತಿದೆ. RTPCR ರಿಪೋರ್ಟ್ ಕಡ್ಡಾಯ ಮಾಡಲಾಗಿದೆ. ಧಿಡೀರನೆ ನಡೆದ ಈ ಬೆಳವಣಿಗೆಯಿಂದ ಗಡಿಭಾಗದ ನಿವಾಸಿಗಳು ತೊಂದರೆಯನ್ನು ಅನುಭವಿಸುವಂತಾಗಿದೆ.

 

ಪ್ರತಿನಿತ್ಯ ಮಹಾರಾಷ್ಟ್ರ- ಕರ್ನಾಟಕದ ನಡುವೆ ಲಕ್ಷಾಂತರ ಜನರು ವ್ಯಾಪಾರ ವಹಿವಾಟು, ನೌಕರಿ ಮತ್ತು ಇತರೆ ಕಾರಣಗಳಿಗಾಗಿ ಪ್ರಯಾಣಿಸುತ್ತಾರೆ. ಬೆಳಿಗ್ಗೆ ಮಹಾರಾಷ್ಟ್ರಕ್ಕೆ ಹೋಗಿ ಸಂಜೆ ವಾಪಸ್ ಬರುವವರ ಸಂಖ್ಯೆ ಸಾಕಷ್ಟಿದೆ. ಪರಿಸ್ಥಿತಿ ಹೀಗಿರುವಾಗ ಧಿಡೀರನೆ ಎರಡೂ ರಾಜ್ಯಗಳ ನಡುವಿನ ಪ್ರಯಾಣಕ್ಕೆ ನಿರ್ಬಂಧ ವಿಧಿಸಿರುವುದು ಲಕ್ಷಾಂತರ ಜನರನ್ನು ಸಂಕಷ್ಟಕ್ಕೆ ದೂಡಿದೆ.

 

ಧಿಡೀರನೆ ನಿರ್ಬಂಧ ವಿಧಿಸಲು ಏನು ಕಾರಣ ಎಂದು ಪ್ರಯಾಣಿಕರು ಕೇಳುತ್ತಿದ್ದಾರೆ. ಚೆಕ್ ಪೋಸ್ಟ್ ನಲ್ಲಿ ಪೊಲೀಸರು ಮತ್ತು ಪ್ರಯಾಣಿಕರ ನಡುವೆ ವಾಗ್ವಾದ ನಡೆಯುತ್ತಿದೆ. ಇಂದು ಮುಂಜಾನೆಯೇ ಮಹಾರಾಷ್ಟ್ರದಿಂದ ಆಗಮಿಸುತ್ತಿದ್ದ ಓರ್ವ ವೈದ್ಯನನ್ನು ಪೊಲೀಸರು ತಡೆದಾಗ ದೊಡ್ಡ ಜಗಳವೇ ಆಗಿದೆ. ವೈದ್ಯ ಮತ್ತು ಪೊಲೀಸ್ ಸಿಬ್ಬಂದಿ ಪರಸ್ಪರ ಬೈದಾಡಿಕೊಂಡುವ ದೃಶ್ಯದ ವಿಡಿಯೋಗಳು ವೈರಲ್ ಆಗಿವೆ.

 

ಜಿಲ್ಲಾಡಳಿತವನ್ನು ಕೇಳಿದರೆ ಓಮಿಕ್ರಾನ್ ರೂಪಾಂತರಿ ತಳಿಯ ಕಾರಣಕ್ಕೆ ನಿರ್ಬಂಧ ವಿಧಿಸಲಾಗಿದೆ ಎಂದು ಹೇಳಲಾಗುತ್ತದೆ. ವಿಶೇ‍ಷವಾಗಿ ದಕ್ಷಿಣ ಆಫ್ರಿಕಾದಲ್ಲಿ ಓಮಿಕ್ರಾನ್ ರೂಪಾಂತರಿಯ ಸುಮಾರು 80 ಪ್ರಕರಣಗಳು ಕಂಡು ಬಂದಿವೆ. ಅದನ್ನು ಬಿಟ್ಟರೆ ನಾಲ್ಕೈದು ದೇಶಗಳಲ್ಲಿ ಕೆಲವೊಂದು ಪ್ರಕರಣಗಳು ಬೆಳಕಿಗೆ ಬಂದಿವೆ. ಓಮಿಕ್ರಾನ್ ಎಷ್ಟು ಪರಿಣಾಮಕಾರಿ ಎನ್ನುವ ಬಗ್ಗೆ ವರದಿ ಬಂದಿಲ್ಲ. ಪ್ರಕರಣಗಳು ಕಂಡು ಬಂದಿರುವ ದೇಶಗಳೊಂದಿಗೆ ಕೇಂದ್ರ ಸರ್ಕಾರವೇ ವಿಮಾನಯಾನವನ್ನು ನಿರ್ಬಂಧಿಸಿಲ್ಲ. ಅದು ಹಾಗೇ ಮುಂದುವರಿದಿದೆ. ಅಷ್ಟರಲ್ಲೇ ಮಹಾರಾಷ್ಟ್ರ ಮತ್ತು ಕೇರಳ ಗಡಿಯಲ್ಲಿ ಓಮಿಕ್ರಾನ್ ನೆಪ ಹೇಳಿ ಪ್ರಯಾಣ ನಿರ್ಬಂಧ ಹೇರಲಾಗಿರುವುದು ಎಷ್ಟು ಸರಿ ಎನ್ನುವುದು ವಿಶೇಷವಾಗಿ ನಿಪ್ಪಾಣಿ, ಅಥಣಿ, ಕಾಗವಾಡ, ರಾಯಬಾಗ, ಸಂಕೇಶ್ವರ ಭಾಗದ ಜನರ ಪ್ರಶ್ನೆಯಾಗಿದೆ. ಏಕೆಂದರೆ ಲಕ್ಷಾಂತರ ಸಂಖ್ಯೆಯಲ್ಲಿ  ಈ ಭಾಗದ ಜನರು  ಪ್ರತಿದಿನ ಮಹಾರಾಷ್ಟ್ರಕ್ಕೆ ಹೋಗಿ ಬರುತ್ತಾರೆ.

 

ಸರ್ಕಾರಕ್ಕೆ ಅಥವಾ ಜಿಲ್ಲಾಡಳಿತಕ್ಕೆ ನಿರ್ಬಂಧ ವಿಧಿಸುವುದು ಸುಲಭದ ಕೆಲಸ. ಆದರೆ ಅದರಿಂದ ಜನರಿಗೆ ಆಗುವ ತೊಂದರೆಗಳನ್ನೂ ಗಮನಿಸಬೇಕು ಎನ್ನುವುದು ಗಡಿಭಾಗದ ಲಕ್ಷಾಂತರ ನಾಗರಿಕರ ಮನವಿ.