ಪರಿಷತ್ ಚುನಾವಣೆ; ಲೆಫ್ಟ್, ರೈಟ್, ಸೆಂಟರ್ ಎಲ್ಲಡೆ ಜಾರಕಿಹೊಳಿ ಸಹೋದರರದ್ದೇ ಪಾರುಪತ್ಯ

ಪರಿಷತ್ ಚುನಾವಣೆ; ಲೆಫ್ಟ್, ರೈಟ್, ಸೆಂಟರ್ ಎಲ್ಲಡೆ ಜಾರಕಿಹೊಳಿ ಸಹೋದರರದ್ದೇ ಪಾರುಪತ್ಯ

 

ಬೆಳಗಾವಿ: ಜಿಲ್ಲೆಯಲ್ಲಿನ ಎರಡು ವಿಧಾನ ಪರಿಷತ್ ಸ್ಥಾನಗಳಿಗೆ ಡಿಸೆಂಬರ್ 10 ರಂದು ದಿನಾಂಕ ನಿಗದಿಯಾಗಿದೆ. ಚುನಾವಣೆಗೆ ಬಿಜೆಪಿ ಮತ್ತು ಕಾಂಗ್ರೆಸ್ ತಲಾ ಒಂದೊಂದು ಅಭ್ಯರ್ಥಿಯನ್ನು ಕಣಕ್ಕಿಳಿಸಿವೆ. ಪಕ್ಷೇತರ ಅಭ್ಯರ್ಥಿಯಾಗಿ ಲಖನ್ ಜಾರಕಿಹೊಳಿ ಸ್ಪರ್ಧಿಸಿದ್ದಾರೆ. ಕಣದಲ್ಲಿರುವ ಮೂರೂ ಪ್ರಮುಖ ಅಭ್ಯರ್ಥಿಗಳ ಸೋಲು-ಗೆಲುವಿನಲ್ಲಿ ಜಾರಕಿಹೊಳಿ ಸಹೋದರರೇ ನಿರ್ಣಾಯಕ ಪಾತ್ರ ವಹಿಸುತ್ತಿರುವುದು ವಿಶೇಷ.

 

ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಚುನಾವಣೆಯನ್ನು ಎದುರಿಸುತ್ತಿದ್ದು, ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಸಹೋದರ ಚನ್ನರಾಜ ಹಟ್ಟಿಹೊಳಿ ಕಣದಲ್ಲಿದ್ದಾರೆ. ಮೂರನೇ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಕಣದಲ್ಲಿರುವ ಮಹಾಂತೇಶ ಕವಟಗಿಮಠ ಶಾಸಕರಾದ ರಮೇಶ ಜಾರಕಿಹೊಳಿ ಮತ್ತು ಬಾಲಚಂದ್ರ ಜಾರಕಿಹೊಳಿ ಬೆಂಬಲವನ್ನು ನಂಬಿಕೊಂಡಿದ್ದಾರೆ. ಇನ್ನು ಪಕ್ಷೇತರರಾಗಿ ಲಖನ್ ಜಾರಕಿಹೊಳಿ ಚುನಾವಣಾ ಕಣದಲ್ಲಿ ಧುಮುಕಿದ್ದು, ಯಾರ ಮತಗಳ ಬುಟ್ಟಿಗೆ ಕೈಹಾಕುತ್ತಾರೆ ಎನ್ನುವ ಕುತೂಹಲ, ಆತಂಕ ಎಲ್ಲರಲ್ಲಿದೆ.

 

ಗೋಕಾಕ ವಿಧಾನಸಭೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಸಹೋದರ ರಮೇಶ ಜಾರಕಿಹೊಳಿ ವಿರುದ್ಧ ಸ್ಪರ್ಧಿಸಿ ಪರಾಭವಗೊಂಡಿದ್ದ ಲಖನ್, ಬಳಿಕ ಕಾಂಗ್ರೆಸ್ ನಿಂದ ದೂರವಾಗಿ ಬಿಜೆಪಿ ಜೊತೆ ಗುರುತಿಸಿಕೊಂಡಿದ್ದರು. ಈಗ ಅವರೇ ಪಕ್ಷೇತರರಾಗಿ ಕಣದಲ್ಲಿರುವುದರಿಂದ ಅವರು ಬಿಜೆಪಿ ಬಂಡಾಯ ಅಭ್ಯರ್ಥಿ ಎನ್ನುವಂತೆ ಮೇಲ್ನೋಟಕ್ಕೆ ಗೋಚರಿಸುತ್ತಿದೆ. “ತಾನು ಯಾವ ಪಕ್ಷದ ಬಂಡಾಯ ಅಭ್ಯರ್ಥಿಯೂ ಅಲ್ಲ. ಬದಲಾಗಿ ಪಕ್ಷೇತರ ಅಭ್ಯರ್ಥಿ” ಎಂದು ಲಖನ್ ತಾವೇ ಘೋಷಿಸಿಕೊಂಡಿದ್ದರೂ, ಅವರು ಬಿಜೆಪಿಗೆ ನಿಕಟವಾಗಿರುವುದಂತೂ ಸುಳ್ಳಲ್ಲ.

 

ಲಖನ್ ಜಾರಕಿಹೊಳಿ ಅವರನ್ನು ಬಿಜೆಪಿಯ ಎರಡನೇ ಅಭ್ಯರ್ಥಿಯಾಗಿ ಘೋಷಣೆ ಮಾಡಬೇಕೆಂದು ಎರಡು ವಾರಗಳ ಹಿಂದೆ ಬಾಲಚಂದ್ರ ಜಾರಕಿಹೊಳಿ ಬಿಜೆಪಿ ವರಿಷ್ಠರಲ್ಲಿ ಮನವಿ ಮಾಡಿದ್ದರು. ಆದರೆ ವರಿಷ್ಠರು ಅವರ ಮನವಿಯನ್ನು ಪರಿಗಣಿಸಿಲ್ಲ. ಈಗ ಲಖನ್ ಪಕ್ಷೇತರರಾಗಿ ಕಣದಲ್ಲಿದ್ದಾರೆ.

 

ಮತ್ತೊಮ್ಮೆ ಸಚಿವ ಸಂಪುಟ ಸೇರಲು ಕಸರತ್ತು ನಡೆಸುತ್ತಿರುವ ರಮೇಶ ಜಾರಕಿಹೊಳಿ ಅವರಿಗೆ ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಅವರನ್ನು ಗೆಲ್ಲಿಸಿಕೊಂಡು ಬರುವುದು ಅನಿವಾರ್ಯವಾಗಿದೆ. ಲಖನ್ ಹಿಂದೆ ರಮೇಶ ಮತ್ತು ಬಾಲಚಂದ್ರ ಇದ್ದಾರೆ ಎನ್ನುವುದು ಗುಟ್ಟಾಗೇನೂ ಉಳಿದಿಲ್ಲ. ಮಹಾಂತೇಶ ಕವಟಗಿಮಠ ಜೊತೆಗೆ ಲಖನ್ ಅವರನ್ನೂ ಗೆಲ್ಲಿಸಿಕೊಂಡು ಬರಲು ರಮೇಶ ಮತ್ತು ಬಾಲಚಂದ್ರ ಸಾಧ್ಯವಿರುವ ಎಲ್ಲ ತಂತ್ರಗಳನ್ನೂ ಬಳಸುತ್ತಿದ್ದಾರೆ. ಕಳೆದ ಬಾರಿ ತಮ್ಮ ಸಹಕಾರದಿಂದ ಪಕ್ಷೇತರರಾಗಿ ನಿಂತು ವಿಧಾನ ಪರಿಷತ್ ಪ್ರವೇಶಿಸಿದ್ದ ವಿವೇಕರಾವ ಪಾಟೀಲ ಅವರನ್ನು ಬಿಜೆಪಿಗೆ ಕರೆತಂದಿದ್ದಾರೆ.

 

ವಿವೇಕರಾವ ಪಾಟೀಲ ಬಿಜೆಪಿ ಸೇರ್ಪಡೆ ಬಗ್ಗೆ ಅಧಿಕೃತ ಮಾಹಿತಿಗಳು ಲಭ್ಯವಿಲ್ಲ. ಸ್ವತ: ವಿವೇಕರಾವ ತಾವು ಬಿಜೆಪಿ ಅಭ್ಯರ್ಥಿ ಕವಟಗಿಮಠ ಮತ್ತು ಲಖನ್ ಜಾರಕಿಹೊಳಿ ಅವರನ್ನು ಬೆಂಬಲಿಸುವುದಾಗಿ ಘೋಷಿಸಿದ್ದಾರೆ. ಆದರೆ ಬಿಜೆಪಿಯಿಂದ ಅದಕ್ಕೆ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಸ್ವತ: ಕವಟಗಿಮಠ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸುತ್ತ “ವಿವೇಕರಾವ ಪಾಟೀಲ ಬಿಜೆಪಿ ಸೇರಿದ್ದಾಗಿ ಹೇಳಿರುವ ಬಗ್ಗೆ ಪತ್ರಿಕೆಗಳಲ್ಲಿ ಓದಿದ್ದೇನೆ. ಅವರು ಪಕ್ಷದ ಯಾವ ಮುಖಂಡರನ್ನು ಭೇಟಿಯಾಗಿದ್ದಾರೆ ತನಗೆ ಗೊತ್ತಿಲ್ಲ” ಎಂದಿದ್ದಾರೆ. ಇದು ಬಿಜೆಪಿಯಲ್ಲಿ ಮತ್ತಷ್ಟು ಗೊಂದಲಕ್ಕೆ ಕಾರಣವಾಗಿದೆ.

 

ಬಿಜೆಪಿಯಲ್ಲಿದ್ದಷ್ಟು ಗೊಂದಲಗಳು ಕಾಂಗ್ರೆಸ್ ನಲ್ಲಿ ಕಾಣುತ್ತಿಲ್ಲ. ಪಕ್ಷದಲ್ಲಿನ ಎಲ್ಲ ಮುಖಂಡರೂ ಯುವನಾಯಕ ಚನ್ನರಾಜ ಹಟ್ಟಿಹೊಳಿ ಅವರನ್ನು ಬೆಂಬಲಿಸಿದ್ದಾರೆ. ಜಿಲ್ಲೆಯಲ್ಲಿ ಕಾಂಗ್ರೆಸ್ ನಿಂದ ಆಯ್ಕೆಯಾಗಿರುವ ನಾಲ್ಕು ಸಾವಿರಕ್ಕೂಹೆಚ್ಚು ಗ್ರಾಮ ಪಂಚಾಯತಿ ಸದಸ್ಯರಿದ್ದಾರೆ. ಅವರ ಜೊತೆ ಕಾಂಗ್ರೆಸ್ ಈಗಾಗಲೇ ಸಂಪರ್ಕದಲ್ಲಿದೆ. ಆದರೆ ನಾಲ್ಕು ಸಾವಿರದಲ್ಲಿ ಲಖನ್ ಜಾರಕಿಹೊಳಿ ಎಷ್ಟು ಮತಗಳನ್ನು ಕದಿಯುತ್ತಾರೆ ಎನ್ನುವುದರ ಆಧಾರದ ಮೇಲೆ ಚನ್ನರಾಜ ಹಟ್ಟಿಹೊಳಿ ಸೋಲು-ಗೆಲುವು ನಿರ್ಣಯವಾಗಲಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿರುವ ಸತೀಶ ಜಾರಕಿಹೊಳಿ ಅವರಿಗೂ ಪಕ್ಷದಲ್ಲಿ ತಮ್ಮ ಪ್ರಭಾವವನ್ನು ಮುಂದುವರಿಸಿಕೊಂಡು ಹೋಗಲು ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುವುದು ಅಷ್ಟೇ ಮುಖ್ಯವಾಗಿದೆ.

 

ಪಕ್ಷ ಯಾವುದೇ ಇರಲಿ. ಬೆಳಗಾವಿ ಜಿಲ್ಲೆಯ ಮಟ್ಟಿಗೆ ಅಭ್ಯರ್ಥಿಗಳ ಸೋಲು – ಗೆಲುವು ನಿರ್ಧರಿಸುವ ಕೀಲಿ ಕೈಯನ್ನು ಜಾರಕಿಹೊಳಿ ಸಹೋದರರೇ ಇಟ್ಟುಕೊಂಡಿದ್ದಾರೆ ಎನ್ನುವುದು ಸ್ಪಷ್ಟವಾಗಿ ಕಾಣುತ್ತಿದೆ.