ಪಾಲಿಕೆ‌ ಚುನಾವಣೆ:  ಕಾಂಗ್ರೆಸ್ - ಬಿಜೆಪಿ ನಡುವೆ ವಾಕ್ಸಮರಕ್ಕೆ ಕಾರಣವಾದ 100 ರೂ ಬಾಂಡ್ ಮೇಲಿನ ಮನೆಗಳ ಸಕ್ರಮಾತಿ ವಿಚಾರ

ಪಾಲಿಕೆ‌ ಚುನಾವಣೆ:  ಕಾಂಗ್ರೆಸ್ - ಬಿಜೆಪಿ ನಡುವೆ ವಾಕ್ಸಮರಕ್ಕೆ ಕಾರಣವಾದ 100 ರೂ ಬಾಂಡ್ ಮೇಲಿನ ಮನೆಗಳ ಸಕ್ರಮಾತಿ ವಿಚಾರ
ಬೆಳಗಾವಿ: 100 ರೂ. ಬಾಂಡ್ ಮೇಲೆ ಖರೀದಿ ಮಾಡಿ ನಿರ್ಮಿಸಿದ ಮನೆಗಳನ್ನು ಸಕ್ರಮಗೊಳಿಸುವುದು 20 ವರ್ಷಗಳ ಹಳೆಯ ಸಮಸ್ಯೆಯಾಗಿದೆ. ಕೇವಲ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯವರು ಅದನ್ನು ಈಗ ಪ್ರಸ್ತಾಪಿಸಿದ್ದಾರೆ. ಇಷ್ಟು ದಿನ ಅವರು ಏನು ಮಾಡುತ್ತಿದ್ದರು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಪ್ರಶ್ನಿಸಿದ್ದಾರೆ.
ಕಾನೂನುಬದ್ಧವಾಗಿ ‌ನೋಂದಣಿಯಾಗದೆ, ಎನ್.ಎ, ಲೇಔಟ್ ಇಲ್ಲದೆ ಕೇವಲ 100 ರೂ ಬಾಂಡ್ ಪೇಪರ್ ಮೇಲೆ ನಿವೇಶನ ಖರೀದಿಸಿ ಬೆಳಗಾವಿಯಲ್ಲಿ ಸಾವಿರಾರು ಮಂದಿ ಮನೆಗಳನ್ನು ‌ನಿರ್ಮಿಸಿಕೊಂಡಿದ್ದಾರೆ. ಇಂತಹ‌ ಮನೆಗಳ ಸಕ್ರಮೀಕರಣ ಸಾಧ್ಯವೇ ಎನ್ನುವ ಪ್ರಶ್ನೆ ಆಗಾಗ ಏಳುತ್ತಲೇ ಇದೆ. ಚುನಾವಣೆ ಬಂದಾಗಲೊಮ್ಮೆ ರಾಜಕಾರಣಿಗಳು ಅಲ್ಲಿಯ ಜನರ ಓಟು ಪಡೆಯಲು ಮನೆಗಳನ್ನು ಸಕ್ರಮ ಮಾಡಿಕೊಡುವ ಆಮಿಷ ತೋರಿಸುತ್ತಾರೆ. ಚುನಾವಣೆ ನಂತರ‌ ಅದು ಯಥಾಸ್ಥಿತಿ ‌ಮುಂದುವರಿಯುತ್ತದೆ. ಈ ಬಾರಿಯ ವಿಶೇಷತೆ ಎಂದರೆ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ‌ಬಿಜೆಪಿ‌ ಇದನ್ನೇ ಮುಖ್ಯ ಅಜೆಂಡಾ ಮಾಡಿಕೊಂಡಿದೆ. ಹೀಗಾಗಿ‌ 100 ರೂ ಬಾಂಡ್‌ ಮೇಲಿನ ಮನೆಗಳ ಸಕ್ರಮಾತಿ ವಿಷಯ ಮತ್ತೆ ಮುನ್ನೆಲೆಗೆ ಬಂದಿದೆ.
ಇಲ್ಲಿನ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಸತೀಶ್ ಜಾರಕಿಹೊಳಿ, ಬಾಂಡ್ ಗಳ ಮೇಲೆ ನಿರ್ಮಿಸಿದ ಮನೆಗಳನ್ನು ಸಕ್ರಮಗೊಳಿಸವುದು ಹೇಳಿದಷ್ಟು ಸುಲಭವಲ್ಲ. ಮನೆಗಳ ಸಕ್ರಮವನ್ನು ಸರ್ಕಾರ ಅಧಿಕೃತವಾಗಿ ಘೋಷಿಸಬೇಕು. ಇದಕ್ಕೆ ವಿವಿಧ ಇಲಾಖೆಗಳ ಸಹಮತವೂ ಬೇಕು ಎಂದರು.
ಚುನಾವಣೆ ಮುಗಿದ ಮೇಲೆ ಜನರು ಈ ಬಗ್ಗೆ ಯಾರನ್ನು ಕೇಳುವುದು? ಮುಖ್ಯಮಂತ್ರಿಗಳ ಮಟ್ಟದಲ್ಲಿ ಇದು ಚರ್ಚೆಯಾಗಬೇಕು. ಚುನಾವಣೆಗೂ ಮೊದಲೇ ರಾಜ್ಯ ಸರ್ಕಾರವೇ ಮನೆಗಳನ್ನು ಸಕ್ರಮಗೊಳಿಸುವ ಕುರಿತು ಅಧಿಕೃತವಾಗಿ ಘೋಷಿಸಲಿ ಎಂದು ಸತೀಶ ಸವಾಲು ಹಾಕಿದರು. 
ಪಾಲಿಕೆ ಚುನಾವಣೆಗೆ ಬಿಜೆಪಿ ಬಿಡುಗಡೆ ಮಾಡಿರುವ ಪ್ರಣಾಳಿಕೆಯಲ್ಲಿ 24x7 ಕುಡಿಯುವ ನೀರಿನ ಯೋಜನೆ, ಕಸ ಸಂಗ್ರಹಣೆ ಸೇರಿ ಬಹುತೇಕ ಎಲ್ಲ ಹಳೆಯ ಯೋಜನೆಗಳೇ ಇವೆ. ಇವರು ಹೊಸದು ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದ ಅವರು, ಉಚಿತ ಶವಸಂಸ್ಕಾರ ರಾಜ್ಯ ಸರ್ಕಾರದ ಹಳೆಯ ಯೋಜನೆಯಾಗಿದೆ. ಕೋವಿಡ್ ನಿಂದ ಮೃತರಾದವರಿಗೆ ಉಚಿತ ಶವಸಂಸ್ಕಾರ ಮಾಡುವ ವ್ಯವಸ್ಥೆಯನ್ನು ರಾಜ್ಯ ಸರ್ಕಾರವೇ ಕಲ್ಪಿಸಿದೆ. ಇದರಲ್ಲಿ ಹೊಸದೇನು ಇಲ್ಲ ಎಂದರು.