ಆರ್.ಎಸ್.ಎಸ್ ಮತ್ತು ಬಿಜೆಪಿ ವರಿಷ್ಠರ ಬೆಂಬಲ ಇರದೇ ಇದ್ದಿದ್ದರೆ ನನ್ನನ್ನು ಮುಗಿಸಿ ಬಿಡುತ್ತಿದ್ದರು”- ಸ್ಫೋಟಕ ಮಾಹಿತಿ ಸಿಡಿಸಿದ ರಮೇಶ ಜಾರಕಿಹೊಳಿ  

ಆರ್.ಎಸ್.ಎಸ್ ಮತ್ತು ಬಿಜೆಪಿ ವರಿಷ್ಠರ ಬೆಂಬಲ ಇರದೇ ಇದ್ದಿದ್ದರೆ ನನ್ನನ್ನು ಮುಗಿಸಿ ಬಿಡುತ್ತಿದ್ದರು”- ಸ್ಫೋಟಕ ಮಾಹಿತಿ ಸಿಡಿಸಿದ ರಮೇಶ ಜಾರಕಿಹೊಳಿ   

 

ಬೆಳಗಾವಿ: “ನನಗೆ ಬಿಜೆಪಿ ವರಿಷ್ಠರು ಮತ್ತು ಆರ್.ಎಸ್.ಎಸ್ ಬೆಂಬಲ ಇರದೇ ಇದ್ದಿದ್ದರೆ ಇದುವರೆಗೆ ನನ್ನನ್ನು ಮುಗಿಸಿ ಬಿಡುತ್ತಿದ್ದರು” ಎಂದು ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಸ್ಫೋಟಕ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.

 

ಬೆಳಗಾವಿಯಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, “ವರಿಷ್ಠರ ಆಶೀರ್ವಾದ ನನ್ನ ಮೇಲೆ ಇದೆ. ಅದೇ ಕಾರಣಕ್ಕೆ ನಾನು ಇವತ್ತು ಜೀವಂತ ಇದ್ದೇನೆ. ಪ್ರಮುಖ ನಾಯಕನಾಗಿ ಹೊರಹೊಮ್ಮಿದ್ದೇನೆ. ಇಲ್ಲದಿದ್ದರೆ ಷಡ್ಯಂತ್ರ ಮಾಡಿ ಮುಗಿಸಿ ಬಿಡುತ್ತಿದ್ದರು” ಎಂದು ರಮೇಶ ಹೇಳಿದ್ದು, ಯಾರ ಹೆಸರನ್ನೂ ನೇರವಾಗಿ ಪ್ರಸ್ತಾಪ ಮಾಡಿಲ್ಲ.

‘ರಮೇಶ ಜಾರಕಿಹೊಳಿ ಬಿಜೆಪಿಯನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ. ಇಂಥ ಕೊಳಕನ್ನು ಕಾಂಗ್ರೆಸ್ ನಲ್ಲಿ ಒಂದು ಕ್ಷಣವೂ ಇಟ್ಟುಕೊಳ್ಳುತ್ತಿರಲಿಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸಿರುವ ಅವರು, “ಡಿಕೆಶಿ ಆರೋಪಗಳಿಗೆ ಡಿಸೆಂಬರ್ 14 ರಂದು ಚುನಾವಣಾ ಫಲಿತಾಂಶ ಬಂದ ದಿನ ಪ್ರತಿಕ್ರಿಯೆ ನೀಡುತ್ತೇನೆ. ಅತ್ಯಂತ ಕಠೋರವಾಗಿ ಉತ್ತರ ನೀಡುತ್ತೇನೆ. ಆ ದಿನ ಬೇಕಾದರೆ ನಮ್ಮಿಬ್ಬರ ನಡುವೆ ವಾರ್ ಆಗಲಿ. ನಾನು ಬ್ಲ್ಯಾಕ್ ಮೇಲ್ ಮಾಡುತ್ತಿಲ್ಲ.ಮೊದಲ ಪ್ರಾಶಸ್ತ್ಯದ ಮತವನ್ನು ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಪರವಾಗಿ ಕೇಳುತ್ತಿದ್ದೇವೆ. ಅದಕ್ಕಾಗಿ ಜಿಲ್ಲೆಯ ಮೂಲೆಮೂಲೆಗೂ ಭೇಟಿ ನೀಡುತ್ತಿದ್ದೇನೆ” ಎಂದು ಸ್ಪಷ್ಟಪಡಿಸಿದರು.

 

“ರಿಸಲ್ಟ್ ಬಂದ ದಿನ ಡಿಕೆಶಿಯ ಎಲ್ಲ ಆರೋಪಗಳಿಗೆ ಉತ್ತರ ನೀಡುತ್ತೇನೆ. ನನ್ನ ವ್ಯಕ್ತಿತ್ವ, ಡಿಕೆಶಿ ವ್ಯಕ್ತಿತ್ವ, 1985 ರಿಂದ ಜಾರಕಿಹೊಳಿ ಕುಟುಂಬದ ಇತಿಹಾಸ, ಶಿವಕುಮಾರ ಕುಟುಂಬದ ಇತಿಹಾಸ ಎಲ್ಲವನ್ನೂ ಬಿಚ್ಚಿಡುತ್ತೇನೆ. ಎಲ್ಲವನ್ನೂ ಬಹಿರಂಗಪಡಿಸುತ್ತೇನೆ” ಎಂದು ಇದೇ ಸಂದರ್ಭದಲ್ಲಿ ರಮೇಶ ಜಾರಕಿಹೊಳಿ ಹೇಳಿದರು.