ವಿಕೃತ ಕಾಮಿ ಉಮೇಶ ರೆಡ್ಡಿಗೆ ಗಲ್ಲು ಖಾಯಂ; 38 ವರ್ಷಗಳ ಬಳಿಕ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಬೀಳಲಿದೆ ಅಪರಾಧಿಯೊಬ್ಬನ ಕುತ್ತಿಗೆಗೆ ನೇಣು

ವಿಕೃತ ಕಾಮಿ ಉಮೇಶ ರೆಡ್ಡಿಗೆ ಗಲ್ಲು ಖಾಯಂ; 38 ವರ್ಷಗಳ ಬಳಿಕ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಬೀಳಲಿದೆ ಅಪರಾಧಿಯೊಬ್ಬನ ಕುತ್ತಿಗೆಗೆ ನೇಣು

 

 

ಬೆಳಗಾವಿ: ಕಳೆದ 15 ವರ್ಷಗಳಿಂದ ಇಲ್ಲಿಯ ಹಿಂಡಲಗಾ ಕೇಂದ್ರ ಕಾರಾಗ್ರಹದಲ್ಲಿ ಬಂಧಿಯಾಗಿರುವ ಸರಣಿ ಹಂತಕ ಹಾಗೂ ಅತ್ಯಾಚಾರಿ ಉಮೇಶ ರೆಡ್ಡಿಗೆ ಗಲ್ಲು ಶಿಕ್ಷೆ ಮತ್ತೊಮ್ಮೆ ಖಾಯಂ ಆಗಿದ್ದು, ಸುಮಾರು 38 ವರ್ಷಗಳ ನಂತರ ಹಿಂಡಲಗಾ ಜೈಲಿನಲ್ಲಿ ಅಪರಾಧಿಯೊಬ್ಬನ ಕುತ್ತಿಗೆಗೆ ಹಗ್ಗ ಬೀಳಲಿದೆ.  

 

 

1998 ರಲ್ಲಿ ಪೀಣ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಿಧವೆ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಪ್ರಕರಣದಲ್ಲಿ ಬೆಂಗಳೂರಿನ ಸೆಷನ್ಸ್ ಕೋರ್ಟ್ 2007 ರಲ್ಲಿ ಉಮೇಶ ರೆಡ್ಡಿಗೆ ಗಲ್ಲು ಶಿಕ್ಷೆ ವಿಧಿಸಿತ್ತು. ನಂತರ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಶಿಕ್ಷೆಯನ್ನು ಎತ್ತಿ ಹಿಡಿದಿದ್ದವು. ಬಳಿಕ ಕ್ಷಮಾದಾನಕ್ಕಾಗಿ ಆತ ರಾಷ್ಟ್ರಪತಿಗೆ ಮನವಿ ಮಾಡಿಕೊಂಡಿದ್ದ. 2013 ರಲ್ಲಿ ರಾಷ್ಟ್ರಪತಿ ಕ್ಷಮಾದಾನ ಅರ್ಜಿಯೂ ತಿರಸ್ಕೃತಗೊಂಡಿತು. ರಾಷ್ಟ್ರಪತಿಯವರು ಅರ್ಜಿ ವಿಲೇವಾರಿ ಮಾಡಲು ಮೂರು ವರ್ಷಕ್ಕೂ ಹೆಚ್ಚು ವಿಳಂಬ ಮಾಡಿದ್ದಾರೆ. ಇದರಿಂದ ಆರೋಪಿಗೆ ಅನ್ಯಾಯವಾಗಿದೆ. ಹೀಗಾಗಿ ಗಲ್ಲುಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಮಾರ್ಪಡಿಸಬೇಕು ಎಂದು ಆತನ ವಕೀಲರು ಕೋರ್ಟಿನಲ್ಲಿ ವಾದ ಮಂಡಿಸಿದ್ದರು. ಆ ವಾದವನ್ನು ರಾಜ್ಯ ಹೈಕೋರ್ಟ್ ತಿರಸ್ಕರಿಸಿದ್ದು ಗಲ್ಲು ಶಿಕ್ಷೆಯನ್ನು ಖಾಯಂಗೊಳಿಸಿದೆ. ಮುಂದಿನ ಆರೇಳು ವಾರಗಳಲ್ಲಿ ಹಿಂಡಲಗಾ ಜೈಲಿನಲ್ಲಿ ಉಮೇಶ ರೆಡ್ಡಿ ಕುತ್ತಿಗೆಗೆ ನೇಣು ಬೀಳುವುದು ಖಚಿತವಾಗಿದೆ.

 

 

62 ವರ್ಷ ವಯಸ್ಸಿನ ಉಮೇಶ ರೆಡ್ಡಿ 18 ಮಹಿಳೆಯರ ಕೊಲೆ ಮಾಡಿದ್ದನ್ನು ವಿಚಾರಣೆ ವೇಳೆ ಒಪ್ಪಿಕೊಂಡಿದ್ದು, 9 ಪ್ರಕರಣಗಳಲ್ಲಿ ಆತನಿಗೆ ಶಿಕ್ಷೆಯಾಗಿದೆ. ಪೊಲೀಸರ ಪ್ರಕಾರ ಉಮೇಶ ರೆಡ್ಡಿ ಕರ್ನಾಟಕ, ಮಹಾರಾಷ್ಟ್ರ ಮತ್ತು ಗುಜರಾತ ರಾಜ್ಯಗಳಲ್ಲಿ ಒಟ್ಟು ೨೦ಕ್ಕೂ ಹೆಚ್ಚು ಮಹಿಳೆಯರ ಮೇಲೆ ಅತ್ಯಾಚಾರಗೈದು ಕೊಲೆ ಮಾಡಿದ್ದಾನೆ.

 

 

ಉಮೇಶ ರೆಡ್ಡಿಗೆ ನೇಣು ಕುಣಿಕೆಯಿಂದ ತಪ್ಪಿಸಿಕೊಳ್ಳುವ ಅಥವಾ ಮುಂದೆ ಹಾಕುವ ಎಲ್ಲ ಬಾಗಿಲುಗಳೂ ಈಗ ಬಹುತೇಕ ಮುಚ್ಚಿವೆ. ಗಲ್ಲು ಶಿಕ್ಷೆಯಾದ ಕಾರಣ ಆರೋಪಿ ಮತ್ತೊಮ್ಮೆ ಸುಪ್ರೀಂ ಕೋರ್ಟಿಗೆ ಹೋಗಲು ಆರು ವಾರಗಳ ಕಾಲಾವಧಿ ನೀಡುವುದಾಗಿ ಹೈಕೋರ್ಟ್ ಹೇಳಿದೆ. ಆದರೆ ಈಗಾಗಲೇ ಸುಪ್ರೀಂ ಕೋರ್ಟ್ ಗಲ್ಲು ಶಿಕ್ಷೆಯನ್ನು ಪ್ರಕಟಿಸಿದ್ದರಿಂದ ಆರೋಪಿಗೆ ಇದರಿಂದ ಯಾವುದೇ ಲಾಭ ಆಗಲಿಕ್ಕಿಲ್ಲ ಎನ್ನಲಾಗುತ್ತಿದೆ.

 

 

ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಬೆಳಗಾವಿಯ ಹಿಂಡಲಗಾ ಜೈಲು ಮತ್ತೊಮ್ಮೆ ಸುದ್ದಿಯಲ್ಲಿದೆ. ಕಾರಣ ರಾಜ್ಯದಲ್ಲಿ ಆರೋಪಿಗೆ ಗಲ್ಲು ಶಿಕ್ಷೆಯನ್ನು ನೀಡುವ ವ್ಯವಸ್ಥೆ ಇರುವುದು ಬೆಳಗಾವಿಯಲ್ಲಿ ಮಾತ್ರ. ಆದರೆ ಕಳೆದ 38 ವರ್ಷಗಳಿಂದ ಈ ಜೈಲಿನಲ್ಲಿ ಯಾವುದೇ ಗಲ್ಲು ಶಿಕ್ಷೆ ನಡೆದಿಲ್ಲ. ಕೊನೆಯ ಬಾರಿ ಗಲ್ಲು ಶಿಕ್ಷೆ ವಿಧಿಸಿದ್ದು ೧೯೮೩ ರಲ್ಲಿ. ಜೈಲಿನಲ್ಲಿ ಗಲ್ಲಿಗೇರಿಸುವವನ ಜಾಗ ಹಲವಾರು ವರ್ಷಗಳಿಂದ ಖಾಲಿ ಇದ್ದು, ವಿಶೇಷ ಪ್ರಕರಣಗಳಲ್ಲಿ ಸಿದ್ದಪ್ಪ ಕಾಂಬಳೆಯನ್ನು ಕರೆಸಲಾಗುತ್ತದೆ. ಮೊದಲು ಆರೋಪಿಗಳನ್ನು ಗಲ್ಲಿಗೇರಿಸುವ ಕೆಲಸ ನಿರ್ವಹಿಸುತ್ತಿದ್ದ ಸಿದ್ದಪ್ಪ ನಿವೃತ್ತನಾಗಿದ್ದು, ಆತನಿಗೆ 11 ಆರೋಪಿಗಳಿಗೆ ನೇಣು ಹಾಕಿದ ಅನುಭವವಿದೆ.