ವಿಧಾನ ಪರಿಷತ್ ಚುನಾವಣೆ: ಬೆಳಗಾವಿಯಲ್ಲಿ ಘಟಾನುಘಟಿಗಳಿಂದ ನಾಮಪತ್ರ ಸಲ್ಲಿಕೆ

ವಿಧಾನ ಪರಿಷತ್ ಚುನಾವಣೆ: ಬೆಳಗಾವಿಯಲ್ಲಿ ಘಟಾನುಘಟಿಗಳಿಂದ ನಾಮಪತ್ರ ಸಲ್ಲಿಕೆ

 

ಬೆಳಗಾವಿ: ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಯಾಗಿ ವಿಧಾನ ಪರಿಷತ್ತಿನ ಸದಸ್ಯತೆ ಪಡೆಯಲು ಡಿಸೆಂಬರ್ ೧೦ ರಂದು ನಡೆಯಲಿರುವ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದ ಇಂದು, ಬಹುತೇಕ ಘಟಾನುಘಟಿ ಅಭ್ಯರ್ಥಿಗಳು ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ತಮ್ಮ ಸಾವಿರಾರು ಬೆಂಬಲಿಗರ ಮೆರವಣಿಗೆ ಮೂಲಕ ಬಂದು ನಾಮಪತ್ರ ಸಲ್ಲಿಸಿದರು.

 

ಬಿಜೆಪಿ ಅಭ್ಯರ್ಥಿಯಾಗಿ ಮಹಾಂತೇಶ ಕವಟಗಿಮಠ, ಕಾಂಗ್ರೆಸ್ ಅಭ್ಯರ್ಥಿಯಾಗಿ ಚನ್ನರಾಜ ಹಟ್ಟಿಹೊಳಿ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಲಖನ್ ಜಾರಕಿಹೊಳಿ ನಾಮಪತ್ರ ಸಲ್ಲಿಸಿದ್ದಾರೆ. ಎಲ್ಲ ಅಭ್ಯರ್ಥಿಗಳು ಒಂದೇ ದಿನ ಮೆರವಣಿಗೆ ಮೂಲಕ ನಾಮಪತ್ರ ಸಲ್ಲಿಕೆ ಮಾಡಿದ್ದರಿಂದ ನಗರದ ಜನತೆ ಟ್ರಾಫಿಕ್ ಜಾಮ್ ನಿಂದ ಒದ್ದಾಡಬೇಕಾಯಿತು. ಜನನಿಬಿಡ ಮಾರುಕಟ್ಟೆಯ ಬಹುತೇಕ ರಸ್ತೆಗಳು ಜಾಮ್ ಆಗಿದ್ದವು.

 

 ಲಖನ್ ಜೊತೆ ಕಾಣಿಸಿಕೊಂಡ ಹಾಲಿ ವಿಧಾನ ಪರಿಷತ್ ಸದಸ್ಯ ವಿವೇಕರಾವ್ ಪಾಟೀಲ ತನಗೆ ಕಾಂಗ್ರೆಸ್ ಟಿಕೆಟ್ ಸಿಗುವ ನಿರೀಕ್ಷೆ ಇತ್ತು. ಅದು ಕೈತಪ್ಪಿದ್ದರಿಂದ ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಹಾಗೂ ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಅವರಿಗೆ ಬೆಂಬಲ ನೀಡುವುದಾಗಿ ಘೋಷಿಸಿದರು.

 

ಇದಕ್ಕೆ ಪ್ರತಿಕ್ರಿಯಿಸಿದ ಮಹಾಂತೇಶ ಕವಟಗಿಮಠ ಅವರು, ವಿವೇಕರಾವ್ ಪಾಟೀಲ ಅವರು ಯಾವಾಗ ಬಿಜೆಪಿ ಸೇರಿದ್ದಾರೆ ಮತ್ತು ಪಕ್ಷದ ಯಾವ ನಾಯಕರನ್ನು ಭೇಟಿಯಾಗಿದ್ದಾರೆ ಎನ್ನುವುದು ಗೊತ್ತಿಲ್ಲ. ಈ ವಿಷಯವನ್ನು ಪತ್ರಿಕೆಯಲ್ಲಿ ಮಾತ್ರ ನೋಡಿದ್ದೇನೆ ಎಂದರು.

ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಮಾತನಾಡುತ್ತ ತಾನು ಯಾವುದೇ ಪಕ್ಷದ ಬಂಡಾಯ ಅಭ್ಯರ್ಥಿ ಅಲ್ಲ. ಬದಲಾಗಿ ಪಕ್ಷೇತರ ಅಭ್ಯರ್ಥಿ. ನಾನು ಬಿಜೆಪಿ ಬಂಡಾಯ ಅಭ್ಯರ್ಥಿ ಎಂದು ಕೆಲವರಿಗೆ ತಪ್ಪು ಕಲ್ಪನೆಯಾಗಿದೆ. ನನ್ನ ಸ್ಪರ್ಧೆಯಿಂದ ಬಿಜೆಪಿಗೆ ಲಾಭವೇ ಆಗಲಿದೆ ಹೊರತು ಯಾವುದೇ ನಷ್ಟವಿಲ್ಲ ಎಂದು ತಿಳಿಸಿದರು.

 

ಇನ್ನು ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿ ಮಾತನಾಡಿ, “ಈ ಚುನಾವಣೆಯನ್ನು ನಾವು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ನೇತೃತ್ವದಲ್ಲಿ ಮತ್ತು ಜಿಲ್ಲೆಯ ಎಲ್ಲ ಹಿರಿಯ ಮುಖಂಡರ ಸಹಮತದಿಂದ ಎದುರಿಸುತ್ತಿದ್ದೇವೆ. ಜಿಲ್ಲೆಯಲ್ಲಿ ೪,೧೦೦ ಕ್ಕೂ ಹೆಚ್ಚು ಮಂದಿ ಗ್ರಾಮ ಪಂಚಾಯತಿ ಸದಸ್ಯರು ಕಾಂಗ್ರೆಸ್ ನಿಂದ ಆಯ್ಕೆಯಾಗಿದ್ದು, ಪಕ್ಷದ ಗೆಲುವು ನಿಶ್ಚಿತ”  ಎಂದು ಆತ್ಮವಿಶ್ವಾಸದಿಂದ ಹೇಳಿದರು.