ಹಾನಗಲ್ ನಲ್ಲಿ ಕಾಂಗ್ರೆಸ್ ಗೆಲುವು ಮುಂಬರುವ ವಿಧಾನಸಭಾ ಚುನಾವಣೆಗೆ ದಿಕ್ಸೂಚಿ: ಸತೀಶ ಜಾರಕಿಹೊಳಿ

ಹಾನಗಲ್ ನಲ್ಲಿ ಕಾಂಗ್ರೆಸ್ ಗೆಲುವು ಮುಂಬರುವ ವಿಧಾನಸಭಾ ಚುನಾವಣೆಗೆ ದಿಕ್ಸೂಚಿ: ಸತೀಶ ಜಾರಕಿಹೊಳಿ


ಗೋಕಾಕ: ಹಾನಗಲ್ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿರುವುದು ಮುಂಬರುವ ವಿಧಾನಸಭಾ ಚುನಾವಣೆಗೆ ದಿಕ್ಸೂಚಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.


ನಗರದ ಹಿಲ್ ಗಾರ್ಡನ್ ಗೃಹಕಚೇರಿಯಲ್ಲಿ ಉಪಚುನಾವಣೆ ಫಲಿತಾಂಶದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿಯೂ ಮತದಾರರು ಕಾಂಗ್ರೆಸ್ ಗೆ ಬೆಂಬಲವಾಗಿ ನಿಲ್ಲಲಿದ್ದು, ಬಿಜೆಪಿ ವಿರುದ್ಧವಾಗಿ ಮತ ಚಲಾಯಿಸಲು ಕಾಯುತ್ತಿದ್ದಾರೆ ಎಂದರು.


ನಿರೀಕ್ಷೆಯಂತೆ ಎರಡು ಕಡೆ ಗೆಲ್ಲಬೇಕಾಗಿತ್ತು. ಆದರೆ, ಸಿಂದಗಿಯಲ್ಲಿ ಏಕೆ ಸೋಲಾಯಿತು ಗೊತ್ತಿಲ್ಲ. ಹಾನಗಲ್ ನಮಗೆ ಪ್ರತಿಷ್ಠೆಯಾಗಿತ್ತು, ಅಲ್ಲಿ ನಾವು ಗೆದ್ದಿದ್ದೇವೆ. ಶ್ರೀನಿವಾಸ್ ಮಾನೆ ಅವರನ್ನು ಗೆಲ್ಲಿಸಲು ಪಕ್ಷದ ಹಿರಿಯ ನಾಯಕರು ಸೇರಿದಂತೆ ಇಡೀ ಕಾಂಗ್ರೆಸ್ ಕಾರ್ಯಕರ್ತರ ದಂಡೇ ಶ್ರಮಿಸಿದೆ. ಎಲ್ಲರೂ ಉತ್ತಮವಾಗಿ ಕೆಲಸ ಮಾಡಿದ್ದರಿಂದಲೇ ಪಕ್ಷದ ಗೆಲುವು ಸಾಧ್ಯವಾಗಿದೆ ಎಂದು ಪ್ರತಿಕ್ರಿಯಿಸಿದರು.

ಮತದಾರರನ್ನು ಆಮಿಷದಿಂದ ಸೆಳೆಯಲು ಆಗುವುದಿಲ್ಲ:

ನಾನು ಕೂಡ 15 ದಿನಗಳ ಕಾಲ ಕ್ಷೇತ್ರದಲ್ಲಿಯೇ ಇದ್ದು, ಪ್ರತಿ ಹಳ್ಳಿ ಹಳ್ಳಿಗೂ ತೆರಳಿ ಪ್ರಚಾರ ಮಾಡಿದ್ದೆ. ಆಗ ಜನರ ಪ್ರತಿಕ್ರಿಯೆ ನೋಡಿ ಗೆದ್ದೆ ಗೆಲ್ಲುತ್ತೇವೆಂಬ ಆತ್ಮವಿಶ್ವಾಸ ಮೂಡಿತ್ತು. ಅದರಂತೆ ಗೆಲುವು ನಮ್ಮದಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.  


ಸರ್ಕಾರ, ಸಚಿವರು ಯಾರೇ ಬರಬಹುದು, ಜನರಿಗೆ ಎಷ್ಟೇ ದುಡ್ಡು ಹಂಚಬಹುದು. ಆದರೆ ಆಮಿಷದಿಂದ ಮತದಾರರನ್ನು ಸೆಳೆಯಲು ಆಗುವುದಿಲ್ಲ ಎಂಬುದನ್ನು ಈ ಚುನಾವಣೆ ತೋರಿಸಿಕೊಟ್ಟಿದೆ ಎಂದು ಸತೀಶ ಪ್ರತಿಕ್ರಿಯೆ ನೀಡಿದರು.