ಅಥಣಿ ಮೋಟಗಿ ಮಠದ ಶ್ರೀಗಳು ವಿರಚಿತ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಭಾರೀ ಸಿದ್ಧತೆ 

ಅಥಣಿ ಮೋಟಗಿ ಮಠದ ಶ್ರೀಗಳು ವಿರಚಿತ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಭಾರೀ ಸಿದ್ಧತೆ 

 

 

ಬೆಳಗಾವಿ: ಅಥಣಿ ಮೋಟಗಿ ಮಠದ ಶ್ರೀ ಪ್ರಭುಚನ್ನಬಸವ ಸ್ವಾಮೀಜಿ ಅವರು ರಚಿಸಿರುವ ಸರ್ವಧರ್ಮಗಳ ‘ಮಹಾತ್ಮರ  ಚರಿತಾಮೃತ’ ಬೃಹತ್ ಗ್ರಂಥದ ಬಿಡುಗಡೆಗೆ ಭಾರೀ ಸಿದ್ಧತೆ ನಡೆಸಲಾಗುತ್ತಿದ್ದು, ನೂರಾರು ಸ್ವಾಮೀಜಿಗಳ ಉಪಸ್ಥಿತಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಪ್ಟೆಂಬರ್ 25 ರಂದು ಬೆಂಗಳೂರಿನಲ್ಲಿ ಗ್ರಂಥವನ್ನು ಲೋಕಾರ್ಪಣೆಗೊಳಿಸಲಿದ್ದಾರೆ.

 

 ಬೈಲೂರು ನಿಷ್ಕಲ ಮಂಟಪದ ಶ್ರೀ ನಿಜಗುಣಾನಂದ ಸ್ವಾಮೀಜಿ ಅವರು ಗುರುವಾರ ಈ ಕುರಿತಂತೆ ಇಲ್ಲಿಯ ನಾಗನೂರು ರುದ್ರಾಕ್ಷಿ ಮಠದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದರು. ಬಿಡುಗಡೆಗೊಳ್ಳಲಿರುವ ಗ್ರಂಥವು 1,100 ಪುಟಗಳದ್ದಾಗಿದ್ದು, ಇದೊಂದು ವಿನೂತನ ಪ್ರಯತ್ನವಾಗಿದೆ ಎಂದು ಅವರು ಹೇಳಿದರು.

 

 ಆದಿಕವಿ ವಾಲ್ಮೀಕಿಯಿಂದ ಹಿಡಿದು ಆಧುನಿಕ ವಿಶ್ವಕವಿ ರವೀಂದ್ರನಾಥ ಟ್ಯಾಗೋರ ವರೆಗಿನ ಕವಿಗಳು,ಮಹಾವೀರ,ಬುದ್ಧ, ಬಸವನಂತಹ ದಾರ್ಶನಿಕರು, ಶಂಕರ, ರಾಮಾನುಜ, ಮಧ್ವಾಚಾರ್ಯ, ಯೇಸು, ಪೈಗಂಬರ ಹಾಗೂ ಗುರುನಾನಕರಂತಹ ಧರ್ಮಪ್ರವರ್ತಕರು, ಜ್ಞಾನೇಶ್ವರ, ತುಕಾರಾಮ,ಸೇವಾಲಾಲ, ರಾಮದಾಸನಂತಹ ಸಂತರು, ಕನಕ ಮತ್ತು ಪುರಂಧರದಾರಸು, ಅಕ್ಕಮಹಾದೇವಿ, ಅಲ್ಲಮಪ್ರಭು, ಸಿದ್ಧರಾಮೇಶ್ವರರಂತಹ ಯೋಗ ಸಾಧಕರು, ಸಜ್ಜಲಗುಡ್ಡದ ಶರಣಮ್ಮ, ಸೊನ್ನಲಾಪುರದ ರುದ್ರಮ್ಮ ಮತ್ತು ಜಯದೇವಿತಾಯಿಯಂತಹ ಮಹಿಳಾ ಸಾಧಕಿಯರು, ನಿಜಗುಣ ಸರ್ಪಭೂಷಣ, ಬಾಲಲೀಲಾ ಮಹಾಂತ ಶಿವಯೋಗಿ ಶಿಶುನಾಳ ಶರೀಫರಂತಹ ತತ್ವಪದಕಾರರು, ಖ್ವಾಜಾ ಬಂದೆನವಾಜ್ ರಂತಹ ಮಹಮ್ಮದೀಯ ಮೌಲ್ವಿಗಳು, ಎಡೆಯೂರು ಸಿದ್ಧಲಿಂಗೇಶ್ವರ, ಅಥಣಿಯ ಮುರುಘಾಮಠ ಹಾನಗಲ್ ಕುಮಾರಸ್ವಾಮಿಗಳ ಆದಿಯಾಗಿ ಇತ್ತೀಚಿನ ಡಾ.ತೋಂಟದ ಸಿದ್ಧಲಿಂಗ ಸ್ವಾಮೀಜಿಗಳವರೆಗೆ ಅನೇಕ ಸ್ವಾಮೀಜಿಗಳು, ಅರವಿಂದ ರಮಣ ಮಹರ್ಷಿಗಳು, ರಾಮಕೃಷ್ಣ-ವಿವೇಕಾನಂದರಂತಹ ಮಾದರಿ ಗುರುಶಿಷ್ಯರು, ರಾಜಾರಾಮ ಮೋಹನರಾಯ, ದಯಾನಂದ ಸರಸ್ವತಿ, ಜ್ಯೋತಿಬಾ ಫುಲೆ, ನಾರಾಯಣ ಗುರುಗಳಂತಹ ಸಮಾಜ ಸುಧಾರಕರು, ಮಹಾತ್ಮಾ ಗಾಂಧಿ, ಬಾಬಾಸಾಹೇಬ ಅಂಬೇಡ್ಕರರಂತಹ ದೇಶಭಕ್ತರು ಮೊದಲಾದವರ ಚರಿತ್ರೆಗಳು ಈ ಪುಸ್ತಕದಲ್ಲಿವೆ. ಜೊತೆಗೆ ತತ್ವಜ್ಞಾನಿ ಗುರುದೇವ ರಾನಡೆ, ಇಸ್ಕಾನ್ ನ ಪ್ರಭುಪಾದರು, ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಬ್ರಹ್ಮಬಾಬಾ, ಶಿರಡಿಯ ಸಾಯಿಬಾಬಾ ಹೀಗೆ ಒಟ್ಟು ೨೧೨ ಮಹಾತ್ಮರ ಚರಿತ್ರೆಗಳನ್ನು ಪುಸ್ತಕದಲ್ಲಿ ನೀಡಲಾಗಿದೆ. ಜಾತಿ-ಮತ, ಪಂಥ-ಭಾಷೆ ಮತ್ತು ಗಡಿಗಳನ್ನು ಮೀರಿದ ಪ್ರಯತ್ನ ಇದಾಗಿದೆ ಎಂದು ನಿಜಗುಣಾನಂದ ಸ್ವಾಮೀಜಿ ಹೇಳಿದರು.

 

ಕೃತಿಕರ್ತ ಶ್ರೀ ಪ್ರಭುಚನ್ನಬಸವ ಸ್ವಾಮೀಜಿ ಮಾತನಾಡಿ, ಇದೊಂದು ನೂತನ ಪ್ರಯೋಗವಾಗಿದ್ದು, ಇದಕ್ಕಾಗಿ ೫೦೦ ಕ್ಕೂ ಹೆಚ್ಚು ಪುಸ್ತಕಗಳ ಪರಾಮರ್ಶೆ ನಡೆಸಿ ಮಾಹಿತಿ ಸಂಗ್ರಹಿಸಲಾಗಿದೆ. ಯಾವುದೇ ಗ್ರಂಥದಲ್ಲಿ ಮಾಹಿತಿ ಲಭ್ಯವಿಲ್ಲದ ಸಂದರ್ಭದಲ್ಲಿ ಹಲವಾರು ಪ್ರದೇಶಗಳಿಗೆ ಭೇಟಿ ನೀಡಿ ಮಾಹಿತಿ ಪಡೆಯಲಾಗಿದೆ ಎಂದು ಹೇಳಿದರು. ಬೆಳಗಾವಿ ನಾಗನೂರು ರುದ್ರಾಕ್ಷಿ ಮಠದ ಶ್ರೀ ಅಲ್ಲಮಪ್ರಭು ಸ್ವಾಮೀಜಿ, ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಕಾರಂಜಿಮಠದ ಶ್ರೀ ಗುರುಸಿದ್ಧ ಸ್ವಾಮೀಜಿ, ಲಿಂಗಾಯತ ಸಂಘಟನೆ ಅಧ್ಯಕ್ಷ ಶಂಕರ ಗುಡಸ, ಸಾಹಿತಿ ಪ್ರಕಾಶ ಗಿರಿಮಲ್ಲನವರ ಉಪಸ್ಥಿತರಿದ್ದರು