ಪಿಳ್ಳೆ ನೆಪ ಹೇಳಿ ಬೆಳಗಾವಿ ಸುವರ್ಣಸೌಧ‌ ಸುತ್ತ ಪ್ರತಿಭಟನೆ ನಿಷೇಧಿಸಿದ ಸರ್ಕಾರ; 1 ಕಿಮೀ ಆವರಣದಲ್ಲಿ ನಿಷೇಧಾಜ್ಞೆ ಜಾರಿ  

ಪಿಳ್ಳೆ ನೆಪ ಹೇಳಿ ಬೆಳಗಾವಿ ಸುವರ್ಣಸೌಧ‌ ಸುತ್ತ ಪ್ರತಿಭಟನೆ ನಿಷೇಧಿಸಿದ ಸರ್ಕಾರ; 1 ಕಿಮೀ ಆವರಣದಲ್ಲಿ ನಿಷೇಧಾಜ್ಞೆ ಜಾರಿ   

 

ಬೆಳಗಾವಿ: ‘ಕಳ್ಳನಿಗೊಂದು ಪಿಳ್ಳೆ ನೆಪ’ ಎನ್ನುವ ಗಾದೆಗೆ ಹೊಂದಿಕೊಳ್ಳುವಂತೆ ರಾಜ್ಯ ಸರ್ಕಾರ ಕ್ಷುಲ್ಲಕ ಕಾರಣಗಳನ್ನು ಮುಂದೆ ಮಾಡಿ ಬೆಳಗಾವಿಯ ಸುವರ್ಣ ವಿಧಾನಸೌಧ ಆವರಣದಲ್ಲಿ ಪ್ರತಿಭಟನೆ ನಡೆಸುವುದನ್ನು ನಿಷೇಧಿಸಿದೆ. ಇಂದಿನಿಂದ ಅಂದರೆ ಸಪ್ಟೆಂಬರ್ 24 ರಿಂದ ಅಕ್ಟೋಬರ್ 23 ರ ವರೆಗೆ ಸುವರ್ಣಸೌಧ ಕಟ್ಟಡದ ೧ ಕಿ.ಮೀ. ಆವರಣದಲ್ಲಿ ನಿಷೇಧಾಜ್ಞೆಯನ್ನು ಹೇರಲಾಗಿದ್ದು, ಅದು ಮುಂದುವರಿಯುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ.

 

ಈ ಮೂಲಕ ರಾಜ್ಯ ಸರ್ಕಾರ ಸಾರ್ವಜನಿಕರ ಅಥವಾ ಅನ್ಯಾಯಕ್ಕೆ ಒಳಗಾದವರ ಪ್ರತಿಭಟಿಸುವ ಹಕ್ಕನ್ನು ಮೊಟಕುಗೊಳಿಸುವ ಪ್ರಯತ್ನ ಮಾಡಿದ್ದು, ಸರ್ಕಾರದ ಈ ನಿರ್ಧಾರವನ್ನು ವಿವಿಧ ಸಂಘಟನೆಗಳು ಯಾವ ರೀತಿ ತೆಗೆದುಕೊಳ್ಳುತ್ತವೆ ಎನ್ನುವುದನ್ನು ಕಾದು ನೋಡಬೇಕಾಗಿದೆ. ಡಿಸೆಂಬರ್ ತಿಂಗಳಲ್ಲಿ ಚಳಿಗಾಲದ ಅಧಿವೇಶನ ಸುವರ್ಣಸೌಧದಲ್ಲಿ ನಿಗದಿಯಾಗಿದ್ದು, ಆ ಸಂದರ್ಭದಲ್ಲಿ ಸರ್ಕಾರದ ತೀರ್ಮಾನದ ವಿರುದ್ಧ ತೀವ್ರ ಖಂಡನೆ ವ್ಯಕ್ತವಾಗುವ ಸಾಧ್ಯತೆ ಇದೆ.

 

ಅನ್ಯಾಯಕ್ಕೆ ಒಳಗಾದವರು ಅಥವಾ ವಿವಿಧ ಸಂಘಟನೆಗಳು ತಮ್ಮ ಬೇಡಿಕೆಗಳತ್ತ ಸರ್ಕಾರದ ಗಮನ ಸೆಳೆಯಲು ಪ್ರತಿಭಟನೆ ನಡೆಸುವುದು ಮೊದಲಿನಿಂದಲೂ ನಡೆದುಕೊಂಡು ಬಂದಿರುವ ಪ್ರತೀತಿ. ಕೆಲವೊಮ್ಮೆ ದೊಡ್ಡ ಪ್ರಮಾಣದ ಪ್ರತಿಭಟನೆಗಳನ್ನು ಹಮ್ಮಿಕೊಳ್ಳುವ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸವನ್ನೂ ಮಾಡಲಾಗುತ್ತದೆ. ಸಂಘಟನೆಗಳು ಸಾರ್ವಜನಿಕರ ಅಥವಾ ಸರ್ಕಾರದ ಗಮನ ಸೆಳೆಯಲು ರಾಜ್ಯ ಮಟ್ಟದಲ್ಲಿಯಾದರೆ ವಿಧಾನಸೌಧ, ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ, ತಾಲೂಕು ಮಟ್ಟದಲ್ಲಿ ತಹಶೀಲದಾರ ಕಚೇರಿ ಅಥವಾ ಹೆಚ್ಚು ಜನರ ಗಮನವನ್ನು ಸೆಳೆಯಬಹುದಾದ ಸರ್ಕಲ್ ಅಥವಾ ರಸ್ತೆಗಳನ್ನು ಆಯ್ದುಕೊಳ್ಳುತ್ತವೆ. ಆದರೆ ಈಗ ಸರ್ಕಾರ ಉತ್ತರ ಕರ್ನಾಟಕದ ಶಕ್ತಿಸೌಧ ಎಂದೇ ಖ್ಯಾತಿಯಾಗಿರುವ ಸುವರ್ಣಸೌಧದ ಸುತ್ತ 1 ಕಿ.ಮೀ. ಆವರಣದಲ್ಲಿ ಪ್ರತಿಭಟನೆಗಳನ್ನು ನಿಷೇಧಿಸಿದೆ.

 

ಸುವರ್ಣಸೌಧದ ಮುಖ್ಯ ದ್ವಾರದ ಬಳಿ ಹಲವಾರು ಐತಿಹಾಸಿಕ ಪ್ರತಿಭಟನೆಗಳು ನಡೆದಿದ್ದು, ಆ ಮೂಲಕ ಸರ್ಕಾರವನ್ನು ಎಚ್ಚರಿಸುವ ಕೆಲಸ ನಡೆದಿದೆ. ಸುಮಾರು ಮೂರು ವರ್ಷಗಳ ಹಿಂದೆ ಉತ್ತರ ಕರ್ನಾಟಕ ಭಾಗದ ನೂರಾರು ವಿವಿಧ ಮಠಗಳ ಸ್ವಾಮೀಜಿಗಳು ಪ್ರತಿಭಟನೆ ನಡೆಸಿ ಸುವರ್ಣಸೌಧಕ್ಕೆ ಕಚೇರಿಗಳನ್ನು ಸ್ಥಳಾಂತರಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಿದ್ದರು. ಅದೇ ರೀತಿ ರೈತರು, ನೌಕರರು, ಕನ್ನಡ ಪರ ಸಂಘಟನೆಗಳು ಹಲವಾರು ಪ್ರತಿಭಟನೆಗಳನ್ನು ನಡೆಸುವ ಮೂಲಕ ಯಶಸ್ವಿಯಾಗಿ ಸರ್ಕಾರದ ಗಮನವನ್ನು ಸೆಳೆದಿದ್ದಾರೆ. ಅಧಿವೇಶನ ಸಂದರ್ಭದಲ್ಲಿ ನಡೆಯುವ ಪ್ರತಿಭಟನೆಗಳು ಸರ್ಕಾರಗಳಿಗೆ ಇರುಸು-ಮುರುಸು ತರುವಷ್ಟು ಹೆಚ್ಚಿನ ಪ್ರಮಾಣದಲ್ಲಿ ಇರುತ್ತವೆ. ಆದರೆ ಪ್ರತಿಭಟಿಸುವುದು ಸಂವಿಧಾನ ನೀಡಿರುವ ಹಕ್ಕು.ಅದನ್ನೇ ಮೊಟಕುಗೊಳಿಸಲು ಸರ್ಕಾರ ಹೊರಟಿತಾ ಎನ್ನುವ ಪ್ರಶ್ನೆ ಏಳುತ್ತಿದೆ. ಸುವರ್ಣಸೌಧದ 1 ಕಿ.ಮೀ. ಆಚೆ ಪ್ರತಿಭಟನೆ ನಡೆಸಿ ಅಂದರೆ ಯಾರು ಆಲಿಸುತ್ತಾರೆ?

 

ಯಾರ ಅಭಿಪ್ರಾಯ ಏನೇ ಇರಲಿ, ಸರ್ಕಾರ ಈಗಾಗಲೇ ನಿರ್ಧಾರ ತೆಗೆದುಕೊಂಡಿದ್ದು, ಅದರಂತೆ ನಗರ ಪೊಲೀಸ್ ಆಯುಕ್ತ ಕೆ. ತ್ಯಾಗರಾಜನ್ ಅವರು ಒಂದು ತಿಂಗಳ ಕಾಲ ಸುವರ್ಣಸೌಧ ಆವರಣದಲ್ಲಿ ನಿಷೇಧಾಜ್ಞೆ ಹೇರಿ ಆದೇಶ ಹೊರಡಿಸಿದ್ದಾರೆ. ನಿಷೇಧಾಜ್ಞೆ ಆದೇಶದಂತೆ ಸುವರ್ಣಸೌಧದ 1 ಕಿ.ಮೀ. ಆವರಣದಲ್ಲಿ ಐದಕ್ಕಿಂತ ಹೆಚ್ಚು ಜನರು ಗುಂಪು ಸೇರುವುದು, ಮೆರವಣಿಗೆ, ಸಭೆ, ಸಮಾರಂಭ, ಮೆರವಣಿಗೆ, ರಾಜಕೀಯ ಸಭೆ ಸಮಾರಂಭ ಮಾಡುವುದನ್ನು ನಿಷೇಧಿಸಲಾಗಿದೆ. ಅಲ್ಲದೆ, ಸುವರ್ಣಸೌಧ ಆವರಣದಲ್ಲಿ ಪ್ರಚೋದನಾತ್ಮಕ ಹಾಗೂ ಉದ್ರೇಕಕಾರಿ ಹಾಡು ಹಾಡುವುದು, ಕೂಗಾಟ ಮಾಡುವುದು, ವ್ಯಕ್ತಿಗಳ ತೇಜೋವಧೆ ಮಾಡುವಂತಹ ಚಿತ್ರಗಳು, ಚಿಹ್ನೆಗಳು, ಪ್ರತಿಕೃತಿಗಳನ್ನು ಪ್ರದರ್ಶಿಸುವುದನ್ನು ನಿರ್ಬಂಧಿಸಲಾಗಿದೆ.

 

ಅದೇ ರೀತಿ ಶಸ್ತ್ರ, ಬಡಿಗೆ, ಖಡ್ಗ, ಗದೆ, ಬಂದೂಕು, ಚೂರಿ, ಲಾಠಿ, ಡೊಣ್ಣೆ, ಚಾಕು ಅಥವಾ ದೇಹಕ್ಕೆ ಅಪಾಯ ತರುವ ಯಾವುದೇ ರೀತಿಯ ಮಾರಕ ಅಸ್ತ್ರಗಳನ್ನು ತೆಗೆದುಕೊಂಡು ಹೋಗುವುದನ್ನು ಪ್ರತಿಬಂಧಿಸಲಾಗಿದೆ. ಕಲ್ಲು, ಪಟಾಕಿ, ಕ್ಷಾರ ಪದಾರ್ಥ ಅಥವಾ ಸ್ಫೋಟಕ ವಸ್ತುಗಳನ್ನು ಸುವರ್ಣಸೌಧ ಆವರಣಕ್ಕೆ ತೆಗೆದುಕೊಂಡು ಹೋಗುವಂತಿಲ್ಲ. ಶವಸಂಸ್ಕಾರ, ಮದುವೆ ಅಥವಾ ಧಾರ್ಮಿಕ ಕಾರ್ಯಕ್ರಮಗಳಿಗೆ ಈ ಆಜ್ಞೆ ಅನ್ವಯಿಸುವುದಿಲ್ಲ.

 

ನಿಷೇಧಾಜ್ಞೆ ವಿಧಿಸಲು ನೀಡಿರುವ ಕಾರಣಗಳು ಹೀಗಿವೆ:

ಸುವರ್ಣಸೌಧ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿದ್ದರಿಂದ ವಾಹನಗಳ ಓಡಾಟ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ಅಲ್ಲದೆ ಆ ಪ್ರದೇಶ ಇಳಿಜಾರಿನಲ್ಲಿದ್ದು ಅಪಘಾತವಾಗುವ ಸಾಧ್ಯತೆ ಇದೆ. ಹೀಗಾಗಿ ಪ್ರತಿಭಟನೆ ನಡೆಸಿದಲ್ಲಿ ಜನರ ಸಂಚಾರಕ್ಕೆ ಹೆಚ್ಚು ತೊಂದರೆಯಾಗುತ್ತದೆ.

 

ಬೆಳಗಾವಿ ನಗರದಲ್ಲಿ ಅನೇಕ ದೊಡ್ಡ ಆಸ್ಪತ್ರೆಗಳಿದ್ದು, ಪ್ರತಿಭಟನೆ ನಡೆಸಿದಲ್ಲಿ ರೋಗಿಗಳನ್ನು ತರುವ ಅಂಬುಲೆನ್ಸ್ ಸಂಚಾರಕ್ಕೆ ತೊಂದರೆ ಆಗುತ್ತದೆ.

 

ಜೀವನಾವಶ್ಯಕ ವಸ್ತುಗಳ ಸಾಗಾಟ ಹೆಚ್ಚಿನ ಪ್ರಮಾಣದಲ್ಲಿ ರಾಷ್ಟ್ರೀಯ ಹೆದ್ದಾರಿ ಮೇಲೆ ನಡೆಯುತ್ತದೆ. ಪ್ರತಿಭಟನೆ ನಡೆದಲ್ಲಿ ಜೀವನಾವಶ್ಯಕ ಸಾಮಗ್ರಿಗಳ ಸಾಗಾಟಕ್ಕೆ ತೊಂದರೆಯಾಗುತ್ತದೆ.

 

ಸುವರ್ಣಸೌಧದಲ್ಲಿ ಹಲವಾರು ಕಚೇರಿಗಳು ನಡೆಯುತ್ತವೆ. ಪ್ರತಿಭಟನೆಯಿಂದ ಅವುಗಳ ದಿನನಿತ್ಯದ ಕೆಲಸ ನಿರ್ವಹಿಸಲು ತೊಂದರೆ ಆಗುತ್ತದೆ.

 

ಸುವರ್ಣಸೌಧಧ ಸುತ್ತಮುತ್ತ ಹಲಗಾ, ಬಸ್ತವಾಡ, ಕೆಕೆ ಕೊಪ್ಪ ಹಾಗೂ ಕೆಲವು ಗ್ರಾಮಗಳು ಭಾಷಾವಾರು ಆಧಾರದ ಮೇಲೆ  ಸೂಕ್ಷ್ಮ ಗ್ರಾಮಗಳಾಗಿರುತ್ತವೆ.