ನಾಳೆ ಜಿಲ್ಲಾ ಕಸಾಪ ಚುನಾವಣೆ; ಖಾನಪ್ಪನವರ ಬಣದಲ್ಲಿ ಎಲ್ಲಿಲ್ಲದ ಉತ್ಸಾಹ, ಮೆಟಗುಡ್ ಗೆ ಮತ್ತೊಮ್ಮೆ ಗೆಲ್ಲುವ ವಿಶ್ವಾಸ

ನಾಳೆ ಜಿಲ್ಲಾ ಕಸಾಪ ಚುನಾವಣೆ; ಖಾನಪ್ಪನವರ ಬಣದಲ್ಲಿ ಎಲ್ಲಿಲ್ಲದ ಉತ್ಸಾಹ, ಮೆಟಗುಡ್ ಗೆ ಮತ್ತೊಮ್ಮೆ ಗೆಲ್ಲುವ ವಿಶ್ವಾಸ

 

ಬೆಳಗಾವಿ: ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ನಾಳೆ ಭಾನುವಾರ ಮತದಾನ ನಡೆಯಲಿದ್ದು, ಚುನಾವಣಾ ಕಣ ರಂಗೇರಿದೆ. ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಗೋಕಾಕಿನ ಬಸವರಾಜ ಖಾನಪ್ಪನವರ ಅವರು ಈ ಬಾರಿಯ ಚುನಾವಣೆಯಲ್ಲಿ ತೀವ್ರ ಪೈಪೋಟಿಯನ್ನು ನೀಡುವ ಎಲ್ಲ ಲಕ್ಷಣಗಳು ಎದ್ದು ಕಾಣುತ್ತಿದ್ದು, ಅವರ ಬಣದಲ್ಲಿ ಎಲ್ಲಿಲ್ಲದ ಉತ್ಸಾಹ ಎದ್ದು ಕಾಣುತ್ತಿದೆ. ಇನ್ನೊಂದೆಡೆ ಬೈಲಹೊಂಗಲ ಮೂಲದ ಹಾಲಿ ಅಧ್ಯಕ್ಷೆ ಮಂಗಲಾ ಮೆಟಗುಡ್ ಮತ್ತೊಮ್ಮೆಈ ಬಾರಿ ಅಧ್ಯಕ್ಷ ಸ್ಥಾನಕ್ಕಾಗಿ ಚುನಾವಣಾ ಕಣದಲ್ಲಿದ್ದು ಗೆಲ್ಲುವ ವಿಶ್ವಾಸದಲ್ಲಿದ್ದಾರೆ.

 

ಕಳೆದ ಹಲವಾರು ವರ್ಷಗಳಿಂದ ಕನ್ನಡ ರಕ್ಷಣಾ ವೇದಿಕೆಯ ಗೋಕಾಕ ತಾಲೂಕು ಘಟಕದ ಅಧ್ಯಕ್ಷರಾಗಿ ಕನ್ನಡದ ಸೇವೆಯನ್ನು ಮಾಡುತ್ತ ಬಂದಿರುವ ಬಸವರಾಜ ಖಾನಪ್ಪನವರ ಅವರಿಗೆ ಬಹುತೇಕ ಎಲ್ಲ ಕನ್ನಡ ಸಂಘಟನೆಗಳ ಬೆಂಬಲ ದೊರೆತಿದೆ. ಕನ್ನಡ ಸಂಘಟನೆಗಳ ಯುವ ಕಾರ್ಯಕರ್ತರು ಖಾನಪ್ಪನವರ ಅವರ ಪ್ರಚಾರದಲ್ಲಿ ಮುಂಚೂಣಿಯಲ್ಲಿದ್ದಾರೆ. ಜೊತೆಗೆ ಶೂನ್ಯ ಸಂಪಾದನೆ ಮಠದ ಶ್ರೀ ಮುರುಘರಾಜೇಂದ್ರ ಸ್ವಾಮೀಜಿ ಸೇರಿದಂತೆ ಹಲವಾರು ಸ್ವಾಮೀಜಿಗಳು ಬಹಿರಂಗ ಬೆಂಬಲ ನೀಡಿರುವುದು ಖಾನಪ್ಪನವರ ಅವರ ಬಣದ ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸಿದೆ.

 

ಕಳೆದ ಒಂದೂವರೆ ದಶಕಕ್ಕೂ ಹೆಚ್ಚು ಕಾಲದಿಂದ ಖಾನಪ್ಪನವರ ಅವರು ಕನ್ನಡಪರ ಹೋರಾಟಗಳಲ್ಲಿ ಸಕ್ರೀಯವಾಗಿ ತೊಡಗಿಕೊಂಡಿರುವುದಲ್ಲದೆ, ಎಲೆಮರೆ ಕಾಯಿಯಂತಿರುವ ಸಾಹಿತಿಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು, ಹಿರಿಯ ಸಾಹಿತಿಗಳನ್ನು ಮತ್ತು ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸೇವೆ ನೀಡಿದ ಪ್ರತಿಭೆಗಳನ್ನು ಗೌರವಿಸುವ ಕೆಲಸುವ ಕೆಲಸವನ್ನು ವೈಯಕ್ತಿಕ ನೆಲೆಯಲ್ಲಿ ಮಾಡುತ್ತ ಬಂದಿದ್ದಾರೆ. ಅನೇಕ ಕಮ್ಮಟಗಳನ್ನು ಆಯೋಜಿಸಿದ್ದಾರೆ. ಕಸಾಪ ಜಿಲ್ಲಾ ಅಧ್ಯಕ್ಷನಾಗಿ ಆಯ್ಕೆಯಾದರೆ ಪರಿಷತ್ತಿನ ಕಾರ್ಯಚಟುವಟಿಕೆಗಳನ್ನು ಗ್ರಾಮ ಮಟ್ಟಕ್ಕೆ ತೆಗೆದುಕೊಂಡು ಹೋಗುವುದಲ್ಲದೆ ಕನ್ನಡಪರ ಹೋರಾಟಗಾರರು ಮತ್ತು ಸಾಹಿತಿಗಳನ್ನು ಮುಖ್ಯ ವಾಹಿನಿಗೆ ತರಲು ಕ್ರಮ ಕೈಗೊಳ್ಳುವುದಾಗಿ ಖಾನಪ್ಪನವರ ತಿಳಿಸಿದ್ದಾರೆ.

 

ಇನ್ನು ಮಂಗಲಾ ಮೆಟಗುಡ್ ವಿಷಯಕ್ಕೆ ಬಂದರೆ ಕಳೆದ ಬಾರಿಯಂತೆ ಈ ಬಾರಿಯೂ ಮತದಾರರು ತನ್ನನ್ನು ಗೆಲ್ಲಿಸುವರು ಎನ್ನುವ ವಿಶ್ವಾಸ ಅವರಲ್ಲಿದೆ. ಕಳೆದ ಬಾರಿಯಂತೆ ಈ ಬಾರಿಯೂ ಕೆಎಲ್ಇ ಅಧ್ಯಕ್ಷ ಪ್ರಭಾಕರ ಕೋರೆ ಅವರು ಮೆಟಗುಡ್ ಪರವಾಗಿ ಮತದಾರರಲ್ಲಿ ಮನವಿ ಮಾಡಿಕೊಂಡಿರುವುದು ಅವರ ಆತ್ಮವಿಶ್ವಾಸ ಹೆಚ್ಚಿಗೆಯಾಗಲು ಕಾರಣವಾಗಿದೆ. ಕಳೆದ ಒಂದು ಅವಧಿಯಲ್ಲಿ ವಿಶೇಷವಾಗಿ ಗಡಿಭಾಗದಲ್ಲಿ ಹಲವಾರು ಸಾಹಿತ್ಯಿಕ ಚಟುವಟಿಕೆಗಳನ್ನು ಹಮ್ಮಿಕೊಂಡಿದ್ದೇನೆ. ಇನ್ನೊಂದು ಬಾರಿ ಆಯ್ಕೆಯಾದರೆ ಅಪೂರ್ಣಗೊಂಡಿರುವ ಗ್ರಾಮ ಕನ್ನಡ ಭವನಗಳ ಕಾಮಗಾರಿ ಪೂರ್ಣಗೊಳಿಸುವುದು, ತಾಲೂಕಿಗೊಂದು ಕನ್ನಡ ಭವನ ನಿರ್ಮಾಣ, ಯುವ ಸಾಹಿತಿಗಳಿಗೆ ಪ್ರೇರಣೆ ನೀಡುವುದು, ಹಿರಿಯ ಸಾಹಿತಿಗಳ ಜೀವನಚರಿತ್ರೆ ದಾಖಲೀಕರಣದ ಕಾರ್ಯಗಳನ್ನು ತೆಗೆದುಕೊಳ್ಳುವುದರ ಜೊತೆಗೆ ಜಿಲ್ಲೆಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲು ಶ್ರಮಿಸುವುದಾಗಿ ಅವರು ಮತದಾರರಿಗೆ ಆಶ್ವಾಸನೆ ಕೊಡುತ್ತಿದ್ದಾರೆ.

 

ಬೆಳಗಾವಿ ನ್ಯಾಯವಾದಿ ರವೀಂದ್ರ ತೋಟಿಗೇರ ಕೂಡ ಜಿಲ್ಲಾಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿದ್ದು, ಪ್ರಚಾರದಲ್ಲಿ ತೊಡಗಿದ್ದಾರೆ. ರಾಜ್ಯದ ಗಡಿಗೆ ಸಂಬಂಧಿಸಿದ ದಾಖಲೆಗಳನ್ನು ಸಂಗ್ರಹಿಸುವಲ್ಲಿ ವಿಶೇಷ ಕಾರ್ಯ ಮಾಡಿರುವ ಇವರು, ತಾವು ಆಯ್ಕೆಯಾದರೆ ಗಡಿಯಲ್ಲಿ ಕನ್ನಡ ಮಾಧ್ಯಮ ಶಾಲೆಗಳು ಮುಚ್ಚದಂತೆ ನಿಗಾ ವಹಿಸುವುದಾಗಿ ಮತ್ತು ಬೆಳಗಾವಿಯಲ್ಲಿ ಭುವನೇಶ್ವರಿಯ ದೇವಸ್ಥಾನ ನಿರ್ಮಿಸುವುದಾಗಿ ತಮ್ಮ ಪ್ರಣಾಳಿಕೆಯಲ್ಲಿ ಹೇಳಿಕೊಂಡಿದ್ದಾರೆ. ಒಟ್ಟಾರೆ ಈ ಬಾರಿಯ ಜಿಲ್ಲಾ ಕಸಾಪ ಚುನಾವಣೆ ಹಿಂದಿನ ಚುನಾವಣೆಗಳಿಗಿಂತ ತುರಿಸಿನಿಂದ ಕೂಡಿದೆ.