ಕರ್ನಾಟಕದಲ್ಲಿ ಕಟ್ಟಡ ಕಾರ್ಮಿಕರಿಗೆ ಇರುವ ಸೌಲಭ್ಯಗಳು ಎಷ್ಟು ಗೊತ್ತೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಕರ್ನಾಟಕದಲ್ಲಿ ಕಟ್ಟಡ ಕಾರ್ಮಿಕರಿಗೆ ಇರುವ ಸೌಲಭ್ಯಗಳು ಎಷ್ಟು ಗೊತ್ತೆ? ಇಲ್ಲಿದೆ ಸಂಪೂರ್ಣ ಮಾಹಿತಿ


 
                       ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಣಿ ಹೊಂದಿದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗಾಗಿ ಹಲವಾರು ಸೌಲಭ್ಯಗಳಿದ್ದು, ಕಾರ್ಮಿಕರು ಅವುಗಳ ಬಗ್ಗೆ ಅರಿವು ಹೊಂದಿರುವುದು ಅಗತ್ಯವಾಗಿದೆ. ಈ ಲೇಖನದಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಇರುವ ಸೌಲಭ್ಯಗಳು ಮತ್ತು ಕಾರ್ಮಿಕ ಕಲ್ಯಾಣ ಮಂಡಳಿಗೆ ನೋಂದಣಿಯಾಗುವ ವಿಧಾನವನ್ನು ತಿಳಿಸಿ ಕೊಡಲಾಗಿದೆ. 

ಸೌಲಭ್ಯಗಳನ್ನು ಪಡೆಯಲು ಕಾರ್ಮಿಕರು ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಭರ್ತಿ ಮಾಡಿ ಆಯಾ ವಿಭಾಗದ ಕಾರ್ಮಿಕ ಅಧಿಕಾರಿಗಳು/ ಹಿರಿಯ ಕಾರ್ಮಿಕ ನಿರೀಕ್ಷಕರು/ ಕಾರ್ಮಿಕ ನಿರೀಕ್ಷಕರು ಇವರ ಬಳಿ ನೋಂದಣಿಗಾಗಿ ಸಲ್ಲಿಸಬೇಕು. ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಮಾಡಿಕೊಂಡು ಕಾರ್ಮಿಕ ಕಾರ್ಡ್ ಪಡೆಯುವುದು ಅತ್ಯಂತ ಅಗತ್ಯವಾಗಿದೆ. ನೋಂದಣಿಗಾಗಿ ಕಾಮಗಾರಿ ನಡೆಯುತ್ತಿರುವ ಕಟ್ಟಡದ ಮಾಲಿಕರು, ಗುತ್ತಿಗೆದಾರರು ಅಥವಾ ಕರ್ನಾಟಕ ಸ್ಟೇಟ್ ಕಾಂಟ್ರ್ಯಾಕ್ಟರ್ಸ್ ಅಸೋಸಿಯೇಶನ್ ನವರು ನೀಡುವ ಉದ್ಯೋಗದ ದೃಢೀಕರಣ ಪತ್ರವನ್ನು ಲಗತ್ತಿಸುವುದು ಅಗತ್ಯವಾಗಿದೆ. ಉದ್ಯೋಗ ದೃಢೀಕರಣ ಪತ್ರವನ್ನು ಕಾರ್ಮಿಕ ಇಲಾಖೆ ಅಧಿಕಾರಿಗಳು, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಅಥವಾ ಕಾರ್ಯದರ್ಶಿ ಅವರಿಂದಲೂ ಪಡೆಯಬಹುದು. 

 ಇದರ ಜೊತೆಗೆ ಮೂರು ಪಾಸಪೋರ್ಟ್ ಅಳತೆಯ ಭಾವಚಿತ್ರಗಳು ಮತ್ತು ವಯಸ್ಸಿನ ದೃಢೀಕರಣ ಪತ್ರಕ್ಕಾಗಿ ಶಾಲಾ ದಾಖಲಾತಿ, ಚಾಲನಾ ಪರವಾನಗಿ, ಪಾಸಪೋರ್ಟ್, ಆಧಾರ್ ಕಾರ್ಡ್, ಎಲ್ಐಸಿ ವಿಮೆ ಪಾಲಿಸಿ ಅಥವಾ ಗ್ರಾಮ ಲೆಕ್ಕಿಗರು ಅಥವಾ ಕಂದಾಯ ನಿರೀಕ್ಷಕರು ಅಥವಾ ಸ್ಥಳೀಯ ಸಂಸ್ಥೆಯ ಅಧಿಕಾರಿಗಳು ಅಥವಾ ಜನನ-ಮರಣ ನೋಂದಣಾಧಿಕಾರಿಗಳಿಂದ ವಿತರಿಸಿದ ಪ್ರಮಾಣಪತ್ರ ಅಥವಾ ಸರ್ಕಾರಿ ಆಸ್ಪತ್ರೆ/ಇಎನ್ಐ ಆಸ್ಪತ್ರೆ/ಸ್ಥಳೀಯ ಸಂಸ್ಥೆಗಳ ಆಸ್ಪತ್ರೆ ಅಥವಾ ನೋಂದಾಯಿತ ಎಂಬಿಬಿಎಸ್, ಆಯುರ್ವೇದ, ಯುನಾನಿ ಅಥವಾ ಹೋಮಿಯೋಪಥಿ ವೈದ್ಯರು ಅಥವಾ ನೋಂದಾಯಿತ ಖಾಸಗಿ ಬಿಡಿಎಸ್ ವಿದ್ಯಾರ್ಹತೆ ಹೊಂದಿದ ದಂತ ವೈದ್ಯರಿಂದ ಪ್ರಮಾಣಪತ್ರ ಇವುಗಳಲ್ಲಿ ಯಾವುದಾದರೊಂದು ದಾಖಲೆಯನ್ನು ಸಲ್ಲಿಸಬೇಕು. ಅರ್ಜಿದಾರರು ಆತನ/ಆಕೆಯ ಅವಲಂಬಿತರ ಆಧಾರ ಕಾರ್ಡ್ ಮತ್ತು ಸ್ವಯಂ ದೃಢೀಕರಣ ಪ್ರತಿ ಕಡ್ಡಾಯವಾಗಿ ಸಲ್ಲಿಸುವುದು. ಪ್ರತಿವರ್ಷ ರೂ.25 ನೋಂದಣಿ ಶುಲ್ಕ ನೀಡಬೇಕಾಗುತ್ತದೆ.

ಸೌಲಭ್ಯಗಳು:

ಪಿಂಚಣಿ ಸೌಲಭ್ಯ : ಕನಿಷ್ಟ ಮೂರು ವರ್ಷ ಸದಸ್ಯತ್ವದೊಂದಿಗೆ 60 ವರ್ಷ ಪೂರೈಸಿದ ಫಲಾನುಭವಿಗಳಿಗೆ ಮಾಸಿಕ ರೂ. 1,000

ದುರ್ಬಲತೆ ಪಿಂಚಣಿ: ನೋಂದಾಯಿತ ಫಲಾನುಭವಿಯ ಯಾವುದೇ ರೀತಿಯ ಕಾಯಿಲೆ ಹೊಂದಿದ್ದರೆ ಅಥವಾ ಕಟ್ಟಡ ಕಾಮಗಾರಿ ನಡೆಯುವಾಗ ಅಪಘಾತವಾಗಿ ಶಾಶ್ವತ ಇಲ್ಲವೆ ಭಾಗಶ: ಅಂಗವಿಕಲತೆ ಹೊಂದಿದ್ದಲ್ಲಿ ಪ್ರತಿ ತಿಂಗಳು ರೂ. 1,000 ಪಿಂಚಣಿ ಮತ್ತು ಶೇಕಡಾವಾರು ದುರ್ಬಲತೆ ಆಧರಿಸಿ ರೂ.2 ಲಕ್ಷದ ವರೆಗೆ ಸಹಾಯಧನ

ತರಬೇತಿ/ಟೂಲ್ ಕಿಟ್ ಸೌಲಭ್ಯ: ಅಗತ್ಯಕ್ಕೆ ಅನುಗುಣವಾಗಿ ರೂ.20 ಸಾವಿರ ಸಹಾಯ

ವಸತಿ ಸೌಲಭ್ಯ: ಕಾರ್ಮಿಕ ಗೃಹಭಾಗ್ಯ ಯೋಜನೆ ಅಡಿಯಲ್ಲಿ ರೂ. 2 ಲಕ್ಷದ ವರೆಗೆ ಮುಂಗಡ ಹಣ

ಹೆರಿಗೆ ಸೌಲಭ್ಯ: ತಾಯಿ ಲಕ್ಷ್ಮೀ ಬಾಂಡ್ ಯೋಜನೆ ಅಡಿಯಲ್ಲಿ ಮಹಿಳಾ ಫಲಾನುಭವಿಯ ಮೊದಲ ಎರಡು ಹೆರಿಗೆಗಳ ಸಂದರ್ಭದಲ್ಲಿ ಸಹಾಯಧನ. ಹೆಣ್ಣು ಮಗುವಿನ ಜನನಕ್ಕೆ ರೂ.30 ಸಾವಿರ ಮತ್ತು ಗಂಡು ಮಗುವಿನ ಜನನಕ್ಕೆ ರೂ.20 ಸಾವಿರ

ಅಂತ್ಯಕ್ರಿಯೆ ವೆಚ್ಚ: ಫಲಾನುಭವಿ ಮೃತಪಟ್ಟ ಸಂದರ್ಭದಲ್ಲಿ ಅಂತ್ಯಕ್ರಿಯೆ ವೆಚ್ಚ ಎಂದು ಕುಟುಂಬಕ್ಕೆ ರೂ.4 ಸಾವಿರ ಅನುಗ್ರಹರಾಶಿ ಮತ್ತು ನಂತರ ರೂ.50 ಸಾವಿರ ಸಹಾಯಧನ

ವೈದ್ಯಕೀಯ ಸಹಾಯಧನ: ಕಾರ್ಮಿಕ ಆರೋಗ್ಯ ಭಾಗ್ಯ ಯೋಜನೆ ಅಡಿಯಲ್ಲಿ ನೋಂದಾಯಿತ ಫಲಾನುಭವಿ ಅಥವಾ ಅವರ ಅವಲಂಬಿತರಿಗೆ ಅರೋಗ್ಯ ಸಮಸ್ಯೆಗಳು ಎದುರಾದಲ್ಲಿ ರೂ.300 ದಿಂದ ರೂ.10 ಸಾವಿರ ನೆರವು.

ಅಪಘಾತ ಪರಿಹಾರ: ಫಲಾನುಭವಿ ಮರಣ ಹೊಂದಿದಲ್ಲಿ ಕುಟುಂಬಕ್ಕೆ ರೂ.5 ಲಕ್ಷ ಸಹಾಯಧನ. ಫಲಾನುಭವಿ ಶಾಶ್ವತ ದುರ್ಬಲತೆಗೆ ಈಡಾದಲ್ಲಿ ರೂ.2 ಲಕ್ಷ ಮತ್ತು ಭಾಗಶ: ದುರ್ಬಲತೆಗೆ ಈಡಾದಲ್ಲಿ ರೂ.1 ಲಕ್ಷದ ನೆರವು.

ಪ್ರಮುಖ ವೈದ್ಯಕೀಯ ವೆಚ್ಚ ನಿರ್ವಹಿಸಲು ಸಹಾಯಧನ: ಕಾರ್ಮಿಕ ಚಿಕಿತ್ಸಾ ಭಾಗ್ಯ ಯೋಜನೆ ಅಡಿಯಲ್ಲಿ ಪ್ರಮುಖ ವೈದ್ಯಕೀಯ ಚಿಕಿತ್ಸೆಗಳಿಗಾಗಿ ರೂ.2 ಲಕ್ಷದ ಸಹಾಯಧನ ನೀಡಲಾಗುತ್ತದೆ. ಹೃದಯರೋಗ, ಕಿಡ್ನಿ ಜೋಡನೆ, ಕ್ಯಾನ್ಸರ್ ಶಸ್ತ್ರಚಿಕಿತ್ಸೆ, ಕಣ್ಣಿನ ಶಸ್ತ್ರಚಿಕಿತ್ಸೆ, ಪಾರ್ಶ್ವವಾಯು, ಮೂಳೆ ಶಸ್ತ್ರಚಿಕಿತ್ಸೆ, ಗರ್ಭಕೋಶ ಶಸ್ತ್ರಚಿಕಿತ್ಸೆ, ಅಸ್ತಮಾ ಚಿಕಿತ್ಸೆ, ಗರ್ಭಪಾತ ಪ್ರಕರಣಗಳು, ಪಿತ್ತಕೋಶದ ತೊಂದರೆ ಸಂಬಂಧಿತ ಚಿಕಿತ್ಸೆ, ಮೂತ್ರಪಿಂಡದಲ್ಲಿನ ಕಲ್ಲು ತೆಗೆಯುವ ಚಿಕಿತ್ಸೆ, ಮೆದುಳಿನ ರಕ್ತಶ್ರಾವದ ಚಿಕಿತ್ಸೆ, ಅಲ್ಸರ್ ಚಿಕಿತ್ಸೆ, ಡಯಾಲಿಸಿಸ್ ಚಿಕಿತ್ಸೆ, ಕಿಡ್ನಿ ಶಸ್ತ್ರಚಿಕಿತ್ಸೆ, ಇ.ಎನ್.ಟಿ (ಕಣ್ಣು, ಮೂಗು ಮತ್ತು ಗಂಟಲು) ಗೆ ಸಂಬಂಧಪಟ್ಟ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆ, ನರರೋಗ ಚಿಕಿತ್ಸೆ, ವ್ಯಾಸ್ಕೋಲರ್ ಶಸ್ತ್ರಚಿಕಿತ್ಸೆ, ಅನ್ನನಾಳದ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆ, ಕರುಳಿನ ಶಸ್ತ್ರಚಿಕಿತ್ಸೆ, ಸ್ತನ ಸಂಬಂಧಿತ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆ, ಹರ್ನಿಯ ಶಸ್ತ್ರಚಿಕಿತ್ಸೆ, ಅಪೆಂಡಿಕ್ಸ್ ಶಸ್ತ್ರಚಿಕಿತ್ಸೆ, ಮೂಳೆಮುರಿತ/ಡಿಸ್ಲೊಕೇಶನ್ ಚಿಕಿತ್ಸೆ ಹಾಗೂ ಇತರೆ ಸಾಮಾನ್ಯ ಶಸ್ತ್ರಚಿಕಿತ್ಸೆಗಳು.

ಮದುವೆ ಸಹಾಯಧನ: ಗೃಹಲಕ್ಷ್ಮೀ ಬಾಂಡ್ ಯೋಜನೆ ಅಡಿಯಲ್ಲಿ ಫಲಾನುಭವಿ ಅಥವಾ ಫಲಾನುಭವಿಯ ಇಬ್ಬರು ಮಕ್ಕಳ ಮದುವೆಗೆ ರೂ.50 ಸಾವಿರ ಸಹಾಯಧನ

ಎಲ್.ಪಿ.ಜಿ : ಕಾರ್ಮಿಕ ಅನಿಲಭಾಗ್ಯ ಯೋಜನೆ ಅಡಿಯಲ್ಲಿ ಫಲಾನುಭವಿಗಳಿಗೆ ಉಚಿತ ಎಲ್.ಪಿ.ಜಿ ಸಿಲಿಂಡರ್ ಕನೆಕ್ಷನ್ ಹಾಗೂ ಎರಡು ಬರ್ನರ್ ಇರುವ ಸ್ಟೋ ನೀಡಲಾಗುವುದು.

ಕೆ.ಎಸ್.ಆರ್.ಟಿ.ಸಿ ಬಸ್ ಪಾಸ್ ಸೌಲಭ್ಯ: ರಾಜ್ಯದ ವಿವಿಧ ಕಡೆ ವಿದ್ಯಾಭ್ಯಾಸದಲ್ಲಿ ತೊಡಗಿರುವ ನೋಂದಾಯಿತ ಕಾರ್ಮಿಕರ ಇಬ್ಬರು ಮಕ್ಕಳಿಗೆ ಬಸ್ ಪಾಸ್ ಸೌಲಭ್ಯ ಇದೆ.
 
ಬಿಎಂಟಿಸಿ ಬಸ್ ಪಾಸ್: ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿರುವಂತಹ ನೋಂದಾಯಿಕ ಕಾರ್ಮಿಕರಿಗೆ ವಾಸಸ್ಥಳದಿಂದ ಕೆಲಸ ಮಾಡುವ ಸ್ಥಳಕ್ಕೆ ತಲುಪಲು ಬಸ್ ಪಾಸ್ ವ್ಯವಸ್ಥೆ ಇದೆ.

ತಾಯಿ-ಮಗು ಸಹಾಯಹಸ್ತ: ಮಹಿಳಾ ಫಲಾನುಭವಿಯು ಮಗವಿಗೆ ಜನ್ಮನೀಡಿದ ಸಂದರ್ಭದಲ್ಲಿ ಆಕೆಯ ಮಗುವಿನ ಶಾಲಾ ಪೂರ್ವ ಶಿಕ್ಷಣ ಮತ್ತು ಪೌಷ್ಟಿಕತೆಗಾಗಿ ಮಗುವಿಗಾಗಿ ಮೂರು ವರ್ಷಗಳ ವರೆಗೆ ವಾರ್ಷಿಕ ರೂ.6 ಸಾವಿರ ಸಹಾಯಧನ ನೀಡಲಾಗುವುದು.

ಶೈಕ್ಷಣಿಕ ಸಹಾಯಧನ: ಕಲಿಕೆ ಭಾಗ್ಯ ಯೋಜನೆ ಅಡಿಯಲ್ಲಿ ಫಲಾನುಭವಿಯ ಇಬ್ಬರು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹಲವಾರು  ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಮಕ್ಕಳು 1,2 ಮತ್ತು 3ನೇ ತರಗತಿ ತೇರ್ಗಡೆ ಹೊಂದಿದ ಕೂಡಲೆ ಪ್ರತಿವರ್ಷ ರೂ.2 ಸಾವಿರ, 4,5 ಮತ್ತು 6ನೇ ತರಗತಿ ಉತ್ತೀರ್ಣರಾದಾಗ ರೂ.3 ಸಾವಿರ, 7ನೇ ಮತ್ತು 8ನೇ ತರಗತಿ ಪಾಸಾದಾಗ ರೂ.4 ಸಾವಿರ ಹಾಗೂ 9ನೇ ತರಗತಿ, 10ನೇ ತರಗತಿ ಮತ್ತು ಪಿಯುಸಿ ಮೊದಲ ವರ್ಷ ಪಾಸಾದ ನಂತರ ರೂ.6 ಸಾವಿರ ಸಹಾಯಧನ ನೀಡಲಾಗುತ್ತದೆ. 


ಫಲಾನುಭವಿಯ ಮಕ್ಕಳು ದ್ವಿತೀಯ ಪಿಯುಸಿ ಉತ್ತೀರ್ಣರಾದ ಬಳಿಕ ರೂ.8 ಸಾವಿರ, ಐಟಿಐ ಅಥವಾ ಡಿಪ್ಲೋಮಾ ಉತ್ತೀರ್ಣ ಹೊಂದಿದ ಬಳಿಕ ರೂ.7 ಸಾವಿರ, ಡಿಗ್ರಿ ಮುಗಿದ ತಕ್ಷಣ ರೂ.10 ಸಾವಿರ ನೀಡಲಾಗುವುದು. ಸ್ನಾತಕೋತ್ತರ ಪದವಿ ಸೇರ್ಪಡೆಗೆ ರೂ.20 ಸಾವಿರ ಸಹಾಯಧನ ಮತ್ತು ಮುಂದಿನ ಎರಡು ವರ್ಷಗಳ ವರೆಗೆ ಪ್ರತಿವರ್ಷ ರೂ.10 ಸಾವಿರ. ಫಲಾನುಭವಿಯ ಮಕ್ಕಳ ಎಂಜಿನಿಯರಿಂಗ್ ಕೋರ್ಸ್ ಸೇರಿಕೊಳ್ಳಲು ರೂ.25 ಸಾವಿರ ಮತ್ತು ತೇರ್ಗಡೆ ಹೊಂದಿದ ಬಳಿಕ ರೂ.20 ಸಾವಿರ, ವೈದ್ಯಕೀಯ ಕೋರ್ಸ್ ಸೇರಿಕೊಳ್ಳಲು ರೂ.30 ಸಾವಿರ ಸಹಾಯಧನ ಹಾಗೂ ತೇರ್ಗಡೆ ಹೊಂದಿದ ನಂತರ ರೂ.25 ಸಾವಿರ. ಇನ್ನು ಪಿಎಚ್ಡಿ ಮಾಡಿತ್ತಿದ್ದರೆ ಎರಡು ವರ್ಷಗಳ ವರೆಗೆ ಪ್ರತಿವರ್ಷ ರೂ.20 ಸಾವಿರ ಮತ್ತು ಪಿಎಚ್ಡಿ ಪ್ರಬಂಧ ಸ್ವೀಕರಿಸಿ ನಂತರ ಹೆಚ್ಚುವರಿಯಾಗಿ ರೂ.20 ಸಾವಿರ ನೀಡಲಾಗುವುದು. 

ಪ್ರತಿಭಾವಂತ ವಿದ್ಯಾರ್ಥಿಗಳಿಗಾಗಿ ವಿಶೇಷ ನೆರವು:
ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ತರಗತಿಯಲ್ಲಿ ಶೇ.75 ಅಂಕ ಪಡೆದ ಫಲಾನುಭವಿಗಳ ಮಕ್ಕಳಿಗೆ ರೂ.5 ಸಾವಿರ ನೆರವು. ಪಿಯುಸಿ ಅಥವಾ ತತ್ಸಮಾನ ತರಗತಿಯಲ್ಲಿ ಶೇ.75 ಅಂಕ ಪಡೆದರೆ ರೂ.7 ಸಾವಿರ, ಪದವಿ ಅಥವಾ ತತ್ಸಮಾನ ಕೋರ್ಸ್ ನಲ್ಲಿ ಶೇ.75 ರಷ್ಟು ಅಂಕ ಪಡೆದರೆ ರೂ.10 ಸಾವಿರ ಮತ್ತು ಸ್ನಾತಕೋತ್ತರ ಪದವಿ ಅಥವಾ ತತ್ಸಮಾನ ಕೋರ್ಸ್ ನಲ್ಲಿ ಶೇ.75 ರಷ್ಟು ಅಂಕ ಗಳಿಸಿದ್ದರೆ ರೂ.15 ಸಾವಿರ ನೆರವು ನೀಡಲಾಗುತ್ತದೆ.

ಕಟ್ಟಡ ಮತ್ತು ಇತರೆ ನಿರ್ಮಾಣ ಕೆಲಸಗಳಿಗೆ ಸಂಬಂಧಿಸಿದ ವಿವರಗಳ ಪಟ್ಟಿ (ಕಾರ್ಮಿಕರು ಈ ಕೆಳಗಿನ ಯಾವುದಾದರೂ ಕೆಲಸ ನಿರ್ವಹಿಸುತ್ತಿರಬೇಕು):
ನಿರ್ಮಾಣ, ಮಾರ್ಪಾಡು, ರಿಪೇರಿ, ನಿರ್ವಹಣೆ ಮತ್ತು ಕಟ್ಟಡ ಬೀಳಿಸುವದಕ್ಕೆ ಸಂಬಂಧಪಟ್ಟ ಕಾಮಗಾರಿ, ಕಟ್ಟಡಗಳು, ಬೀದಿಗಳು, ರಸ್ತೆಗಳು, ರೇಲ್ವೆಗಳು, ಟ್ರಾಮವೇಗಳು, ಏರ್ ಫೀಲ್ಡ್, ನೀರಾವರಿ ಚರಂಡಿ, ಏರಿ/ಕಟ್ಟೆ ಕಟ್ಟುವುದು ಮತ್ತು ನೌಕಾ ಕಾಮಗಾರಿಗಳು, ಪ್ರವಾಹ ನಿಯಂತ್ರಣ ಕಾಮಗಾರಿಗಳು (ಮಳೆನೀರು, ಚರಂಡಿ ಕಾಮಗಾರಿಗಳು ಸೇರಿ), ವಿದ್ಯುತ್ ಉತ್ಪಾದನೆ, ಪ್ರಸರಣ ಮತ್ತು ವಿತರಣೆ, ಜಲ ಕಾಮಗಾರಿಗಳು (ನೀರು ವಿತರಣಾ ನಾಲೆಗಳು ಸೇರಿ), ತೈಲ ಮತ್ತು ಅನಿಲ ಸ್ಥಾವರಗಳು, ವಿದ್ಯತ್ ಮಾರ್ಗಗಳು, ವೈರಲೆಸ್, ರೇಡಿಯೋ, ದೂರದರ್ಶನ, ದೂರವಾಣಿ, ದೂರಸಂಪರ್ಕ ಮತ್ತು ಸಮುದ್ರ ಸಂವಹನಗಳಿಗೆ ಸಂಬಂಧಿಸಿದ ನಿರ್ಮಾಣ/ನವೀಕರಣ ಮತ್ತು ದುರಸ್ತಿ, ಆಣೆಕಟ್ಟುಗಳು, ನಾಲೆಗಳು, ಜಲಾಶಯಗಳು, ಜಲಮೂಲಗಳು, ಸುರಂಗಗಳು, ಸೇತುವೆಗಳು, ವಯಾಡಕ್ಟ್ಸ್, ಅಕ್ವೆಡಕ್ಟ್ಸ್, ಕೊಳವೆ ಮಾರ್ಗಗಳ ನಿರ್ಮಾಣ, ಸ್ಥಾವರಗಳು, ಕೂಲಿಂಗ ಟವರ್ ಗಳು, ಪ್ರಸರಣ ಸ್ಥಾವರಗಳು, ಹೆಚ್ಚುವರಿ ನಿರ್ಮಾಣ ಕೆಲಸಗಳು, ಕಲ್ಲು ಮತ್ತು ಗಣಿಗಾರಿಕೆ ಕಾಯ್ದೆ ವ್ಯಾಪ್ತಿಗೆ ಒಳಪಡದ ರಸ್ತೆ ಮತ್ತು ಕಟ್ಟಡ ನಿರ್ಮಾಣದ ಕಲ್ಲು ಕೆಲಸ, ನಿರ್ಮಾಣದಲ್ಲಿ ಚಪ್ಪಡಿ/ಟೈಲ್ಸ್ ಗಳನ್ನು ಅಳವಡಿಸುವುದು, ಯುಜಿಡಿ ನಿರ್ಮಾಣ ಸೇರಿದಂತೆ ಒಳಚರಂಡಿ ಮತ್ತು ಪ್ಲಂಬಿಂಗ್ ಕೆಲಸ, ವೈರಿಂಗ್, ವಿತರಣೆ ಪ್ಯಾನೆಲ್ ಫಿಕ್ಸಿಂಗ್ ಇತ್ಯಾದಿಗಳನ್ನು ಒಳಗೊಂಡ ವಿದ್ಯುತ್ ಕೆಲಸ, ಕೂಲಿಂಗ್ ಮತ್ತು ಹೀಟಿಂಗ್ ಸಿಸ್ಟಂಗಳ ಸ್ಥಾಪನೆ ಮತ್ತು ಅಳವಡಿಕೆ, ಲಿಫ್ಟ್, ಎಕ್ಸಲೇಟರ್ ಇತ್ಯಾದಿಗಳ ಸ್ಥಾಪನೆ, ಸೆಕ್ಯೂರಿಟಿ ಗೇಟ್ ಗಳ ಸ್ಥಾಪನೆ, ಲೋಹದ ಗ್ರಿಲ್/ಕಿಟಕಿ/ ಬಾಗಿಲುಗಳ ಸ್ಥಾಪನೆ, ನೀರಿನ ಕೊಯ್ಲು ರಚನೆಗಳ ನಿರ್ಮಾಣ, ಫ್ಲೋರಿಂಗ್, ವಾಲ್ ಪ್ಯಾನಲಿಂಗ್ ಮುಂತಾದವುಗಳನ್ನು ಒಳಗೊಂಡ ಒಳಾಂಗಣ ವಿನ್ಯಾಸ, ಕಟ್ಟಡ ನಿರ್ಮಾಣ ಸಂದರ್ಭದಲ್ಲಿ ಅಳವಡಿಸುವ ಗ್ಯಾಸ್ ಪ್ಯಾನೆಲ್ ಗಳು, ಎಸಿಪಿ ಶೀಟ್ ಗಳು, ಸ್ಪ್ಲೇಡರ್ ಗ್ಲೇಜಿಂಗ್ ಗಳು, ಪ್ರೀ ಫ್ಯಾಬ್ರಿಕೇಟೆಡ್ ಕಾಂಕ್ರೀಟ್ ಮಾಡ್ಯೂಲ್ಸ್/ಕಾಂಕ್ರೀಟ್ ಬ್ರಿಕ್ಸ್/ ಬಾಕ್ಸ್/ ಹಾಲೋಬ್ಲಾಕ್ಸ್/ ಟೈಲ್ಸ್ ಮುಂತಾದವುಗಳ ಅಳವಡಿಕೆ, ರಸ್ತೆ ಪೀಠೋಪಕರಣಗಳು/ಬಸ್ ಆಶ್ರಯಗಳು/ಸಿಗ್ನಲಿಂಗ್ ಸಿಸ್ಟಂ ಮೊದಲಾದವುಗಳ ನಿರ್ಮಾಣ, ರೋಟರಿಗಳ ನಿರ್ಮಾಣ ಮತ್ತು ಸ್ಥಾಪನೆ, ಕಾರಂಜಿಗಳು, ಸಾರ್ವಜನಿಕ ಉದ್ಯಾನವನ/ತೋಟಗಳಲ್ಲಿ ಈಜುಗೊಳಗಳು, ನಿರ್ಮಾಣ ಉದ್ದೇಶಗಳಿಗಾಗಿ ಭೂಮಿಯ ಕೆಲಸ/ ಭೂಮಿಯ ಹರಡುವಿಕೆ/ನೆಲ ಸಮಗೊಳಿಸುವಿಕೆ ಮತ್ತು ಭೂಮಿಯ ಕತ್ತರಿಸುವಿಕೆ ಇತ್ಯಾದಿ ಕೆಲಸಗಳು, ತಾತ್ಕಾಲಿಕ ಆಶ್ರಯ ತಾಣಗಳ ನಿರ್ಮಾಣ ಮತ್ತು ಅಳವಡಿಕೆ, ಹಾಗೂ ಫಿಲ್ಂ ಸೆಟ್ ಗಳ ನಿರ್ಮಾಣ ಮತ್ತು ಅಳವಡಿಕೆ.