ಕೂಡಲಸಂಗಮ ಶ್ರೀಗಳ ಅವಹೇಳನ; ಡಿಸಿಸಿ ಬ್ಯಾಂಕ್ ನಿರ್ದೇಶಕ ರಾಜೇಂದ್ರ ಅಂಕಲಗಿಗೆ ಸಂಕಷ್ಟ  

ಕೂಡಲಸಂಗಮ ಶ್ರೀಗಳ ಅವಹೇಳನ; ಡಿಸಿಸಿ ಬ್ಯಾಂಕ್ ನಿರ್ದೇಶಕ ರಾಜೇಂದ್ರ ಅಂಕಲಗಿಗೆ ಸಂಕಷ್ಟ   

 

ಬೆಳಗಾವಿ: ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಅವರ ಪ್ರಚಾರ ಮಾಡುವ ಸಂದರ್ಭದಲ್ಲಿ, ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರೀಗಳ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವ ಡಿಸಿಸಿ ಬ್ಯಾಂಕ್ ನಿರ್ದೇಶಕ ರಾಜೇಂದ್ರ ಅಂಕಲಗಿ ಅವರಿಗೆ ಕಂಟಕ ಶುರುವಾಗಿದೆ.

 

ಕಳೆದೆರಡು ದಿನಗಳಿಂದ ರಾಜೇಂದ್ರ ಅಂಕಲಗಿ ಅವರಿಗೆ ಬೆಳಗಾವಿ ಜಿಲ್ಲೆ ಅಷ್ಟೇ ಅಲ್ಲದೆ ರಾಜ್ಯದ ಹಲವಾರು ಭಾಗಗಳಿಂದ ಪಂಚಮಸಾಲಿ ಸಮುದಾಯದ ಮುಖಂಡರು ಮತ್ತು ಕಾರ್ಯಕರ್ತರು ಕಾಲ್ ಮೇಲೆ ಕಾಲ್ ಮಾಡುತ್ತಿದ್ದು, ಬಾಯಿಗೆ ಬಂದಂತೆ ಬೈದು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಶ್ರೀಗಳ ವಿರುದ್ಧ ಬಳಸಿದ ಪದಗಳಿಗೆ ರಾಜೇಂದ್ರ ಅಂಕಲಗಿ ಈಗಾಗಲೇ ಪಂಚಮಸಾಲಿ ಸಮುದಾಯದ ಕ್ಷಮೆಯಾಚಿಸಿದ್ದಾರೆ. ಆದರೆ ಸಮುದಾಯದವರ ಸಿಟ್ಟು ತಣ್ಣಗಾದಂತೆ ಕಾಣುತ್ತಿಲ್ಲ.

 

ಮೂರು ದಿನಗಳ ಹಿಂದೆ ಹಿರೇಬಾಗೇವಾಡಿಯಲ್ಲಿ ಲಖನ್ ಪರ ಪ್ರಚಾರ ನಡೆಸುವಾಗ ರಾಜೇಂದ್ರ ಅಂಕಲಗಿ ಕೂಡಲಸಂಗಮದ ಶ್ರೀಗಳನ್ನು ನಿಂದಿಸಿದ್ದರು. “ಕೂಡಲಸಂಗಮದ ಸ್ವಾಮಿಗಳು ನನಗೆ ಕರೆ ಮಾಡಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣದಲ್ಲಿರುವ ಪಂಚಮಸಾಲಿ ಸಮುದಾಯದ ಚನ್ನರಾಜ ಹಟ್ಟಿಹೊಳಿ ಅವರನ್ನು ಬೆಂಬಲಿಸುವಂತೆ ಕೋರಿದರು. ಆದರೆ ನಾನು ಅವರಿಗೆ ಬುದ್ದಿ ಹೇಳಿ ನೀವು ಧರ್ಮಪೀಠದಲ್ಲಿ ಇರುವವರು ರಾಜಕಾರಣ ಮಾಡಬೇಡಿ. ರಾಜಕಾರಣ ಮಾಡಬೇಕು ಅನಿಸಿದರೆ ಕಾವಿ ತೆಗೆದು ಬೀಸಾಕಿ ಖಾದಿ ಧರಿಸಿ ಅಖಾಡಾಕ್ಕೆ ಬನ್ನಿ. ಬೇಕಾದರೆ ನಾನೇ ಖಾದಿ ಬಟ್ಟೆ ಕೊಡಿಸುತ್ತೇನೆ” ಎಂದು ಬುದ್ಧಿ ಹೇಳಿರುವುದಾಗಿ ಬಹಿರಂಗವಾಗಿ ಹೇಳಿಕೊಂಡಿದ್ದರು.

 

ಅವರ ಹೇಳಿಕೆಯು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ಲ ಆಗಿ ವಿವಾದದ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಮತ್ತೊದು ವಿಡಿಯೋ ಮಾಡಿ ಕೂಡಲಸಂಗಮ ಶ್ರೀಗಳ ಕ್ಷಮೆ ಕೋರಿದ್ದರು. ಕ್ಷಮೆಯಾಚಿಸಿದ ಬಳಿಕವೂ ಅವರಿಗೆ ಬೆದರಿಕೆ ಕಾಲ್ ಗಳು ಬರುವುದು ಮುಂದುವರಿದಿದೆ. ಕಾಲ್ ಮಾಡಿದವರು ರಾಜೇಂದ್ರ ಅಂಕಲಗಿ ಅವರನ್ನು ಹೀನಾಯವಾಗಿ ವಾಚಾಮಗೋಚರವಾಗಿ ಬೈಯುತ್ತಿದ್ದಾರೆ.

 

ಕಾಲ್ ಮಾಡಿದವರಿಗೆಲ್ಲ ರಾಜೇಂದ್ರ ಅಂಕಲಗಿ ‘ಅದೊಂದು ಮುಗಿದ ವಿಚಾರ. ಈಗಾಗಲೇ ಆ ವಿಷಯದಲ್ಲಿ ನಾನು ಕ್ಷಮೆ ಕೋರಿದ್ದೇನೆ. ನಾನು ಕೂಡಲಸಂಗಮ ಶ್ರೀಗಳ ವಿರುದ್ಧ ಮಾತನಾಡಿಲ್ಲ. ಪಂಚಮಸಾಲಿ ಸಮಾಜದ ವಿರುದ್ಧವೂ ಮಾತನಾಡಿಲ್ಲ’ ಎಂದು ಸಮಜಾಯಿಸಿ ಕೊಡುತ್ತಿದ್ದಾರೆ.