ಪರಿಷತ್ ಚುನಾವಣೆ; ಬೆಳಗಾವಿಯಲ್ಲಿ ಪಕ್ಷದ ಓಟು ಬೇರೆಡೆ ಹೋಗದಂತೆ ತಡೆಯಲು ಡಿಕೆಶಿ ವಿಶೇಷ ಕಾರ್ಯತಂತ್ರ  

ಪರಿಷತ್ ಚುನಾವಣೆ; ಬೆಳಗಾವಿಯಲ್ಲಿ ಪಕ್ಷದ ಓಟು ಬೇರೆಡೆ ಹೋಗದಂತೆ ತಡೆಯಲು ಡಿಕೆಶಿ ವಿಶೇಷ ಕಾರ್ಯತಂತ್ರ   

 

ಬೆಳಗಾವಿ: ಜಿಲ್ಲೆಯಲ್ಲಿ ವಿಧಾನ ಪರಿಷತ್ ಚುನಾವಣಾ ಕಣ ರಂಗೇರಿದ್ದು, ತಮ್ಮ ಪಕ್ಷದ ಓಟುಗಳು ಬೇರೆಡೆ ಹೋಗದಂತೆ ತಡೆಯಲು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ ಹಲವಾರು ಕಾರ್ಯತಂತ್ರಗಳನ್ನು ಹೆಣೆದಿದ್ದಾರೆ. ಇಂದು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪಕ್ಷದ ಪ್ರಮುಖರ ಸಭೆಯನ್ನು ಉದ್ದೇಶಿಸಿ ಮಾತನಾಡಿರುವ ಅವರು, ಹಣ ಮತ್ತು ಇತರೆ ಆಮಿಷಕ್ಕೆ ಬಲಿಯಾಗಿ ಗ್ರಾಮ ಪಂಚಾಯತಿ ಸದಸ್ಯರು ವಿರೋಧಿ ಅಭ್ಯರ್ಥಿಗಳಿಗೆ ಓಟು ಹಾಕುವುದನ್ನು ತಡೆಯಲು ವಿಶೇಷ ಜಾಗೃತದಳ ರಚಿಸುವುದಾಗಿ ಹೇಳಿದರು.

 

ಚುನಾವಣಾ ಸಂದರ್ಭದಲ್ಲಿ ಪಕ್ಷದ ಸದಸ್ಯರ ಕಾರ್ಯಚಟುವಟಿಕೆಗಳ ಮೇಲೆ ನಿಗಾ ಇಡಲು ಎರಡು ಗ್ರಾಮ ಪಂಚಾಯತಿಗೆ ಒಂದರಂತೆ ಪಕ್ಷದಲ್ಲಿಯೇ ಒಂದು ಜಾಗೃತ ಸಮಿತಿ ರಚಿಸಲಾಗುವುದು. ಇದಷ್ಟೇ ಅಲ್ಲ, ವಿರೋಧಿ ಬಣದಲ್ಲಿಯೂ ಕೆಲವು ಜಾಗೃತ ಸಮಿತಿ ಸದಸ್ಯರನ್ನು ಸೇರಿಸಿ, ಅಲ್ಲಿನಿಂದಲೇ ನಮ್ಮ ಸದಸ್ಯರ ಚಲನವಲನಗಳ ಮೇಲೆ ನಿಗಾ ಇಡಲಾಗುವುದು. ಪಕ್ಷವಿರೋಧಿ ಚಟುವಟಿಕೆಯ ಸೂಚನೆ ಕಂಡು ಬಂದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

 

ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ್ದೇ ಆದ 4 ಸಾವಿರಕ್ಕೂ ಹೆಚ್ಚು ಮತಗಳಿದ್ದು, ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಅಷ್ಟು ಮತಗಳು ಸಾಕು. “ನಮಗೆ ಹೊರಗಿನ ಮತಗಳು ಬೇಡ. ನಮ್ಮ ಪಕ್ಷದ್ದೇ ಮತಗಳು ಬಿದ್ದರೆ ಸಾಕು. ನಮ್ಮ ಮತಗಳನ್ನು ಉಳಿಸಿಕೊಳ್ಳುವ ಜವಾಬ್ದಾರಿ ಪಕ್ಷದ ಎಲ್ಲ ಕಾರ್ಯಕರ್ತರ ಮೇಲಿದೆ. ಚುನಾವಣೆಗೆ ಮುಂಚೆ ಪಕ್ಷದಿಂದ ಆಯ್ಕೆಯಾಗಿರುವ ಎಲ್ಲ ಗ್ರಾಮ ಪಂಚಾಯತಿ ಸದಸ್ಯರಿಗೆ ಒಂದು ಮಾದರಿ ಬ್ಯಾಲಟ್ ಪೇಪರ್ ಕೊಟ್ಟು, ಮತದಾನ ಹೇಗೆ ಮಾಡಬೇಕು ಎಂದು ತಿಳಿಸಿಕೊಡಬೇಕು. ಕೆಲವರು ಅನಕ್ಷರಸ್ಥರಿದ್ದಾರೆ. ಅವರ ಓಟು ಮಾಹಿತಿಯ ಕೊರತೆ ಕಾರಣಕ್ಕೆ ವೇಸ್ಟ್ ಆಗಬಾರದು. ಅವರಿಗೆ ಮೊದಲ ಪ್ರಾಶಸ್ತ್ಯದ ಒಂದೇ ಮತ ಹಾಕುವಂತೆ ಮನವರಿಕೆ ಮಾಡಿಕೊಡಬೇಕು” ಎಂದು ಅವರು ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.  

 

ಮುಂದೆ ಮಾತನಾಡಿದ ಅವರು, ಬಿಜೆಪಿಯವರು ಕೂಡ ಒಂದೇ ಓಟು ಹಾಕಲು ತಮ್ಮ ಕಾರ್ಯಕರ್ತರಿಗೆ ಹೇಳಿದರೆ ಮಾತ್ರ ಅವರಿಗೆ ಭವಿಷ್ಯವಿದೆ ಎಂದ ಡಿಕೆ ಶಿವಕುಮಾರ, ಬೆಳಗಾವಿ ಜಿಲ್ಲೆಯಲ್ಲಿ ದುಷ್ಟ ರಾಜಕಾರಣ ನಡೆಯುತ್ತಿದೆ. ಆ ಕೊಳಕು ಮೊದಲು ನಮ್ಮಲ್ಲಿತ್ತು. ಈಗ ಅದು ಬಿಜೆಪಿಯಲ್ಲಿದೆ. ನಮ್ಮ ಪಕ್ಷ ಕ್ಲೀನ್ ಆಗಿದೆ ಎಂದು ಪರೋಕ್ಷವಾಗಿ ರಮೇಶ ಜಾರಕಿಹೊಳಿ ವಿರುದ್ಧ ಟೀಕಾಪ್ರಹಾರ ನಡೆಸಿದ ಅವರು, ದೊಡ್ಡ ಸಾಹುಕಾರ ಅಂದ್ರೆ ಯಾವ ಊರ ಸಾಹುಕಾರ ಎಂದು ವ್ಯಂಗ್ಯವಾಡಿದರು. ರಮೇಶ ಜಾರಕಿಹೊಳಿ ಇತ್ತೀಚಿಗೆ ಕಾಂಗ್ರೆಸ್ ಮುಖಂಡ ಮತ್ತು ಮಾಜಿ ಕಾಗವಾಡ ಶಾಸಕ ರಾಜು ಕಾಗೆ ಅವರನ್ನು ಭೇಟಿ ಮಾಡಿದ್ದಕ್ಕೆ ಅವರು ಅಸಮಾಧಾನ ವ್ಯಕ್ತಪಡಿಸಿದರು.