ಸತ್ಯ ನುಡಿದಿದ್ದಕ್ಕೆ ಶ್ರೀಮಂತ ಪಾಟೀಲ ಅಭಿನಂದಿಸಿದ‌ ಡಿ.ಕೆ.ಶಿವಕುಮಾರ

ಸತ್ಯ ನುಡಿದಿದ್ದಕ್ಕೆ ಶ್ರೀಮಂತ ಪಾಟೀಲ ಅಭಿನಂದಿಸಿದ‌ ಡಿ.ಕೆ.ಶಿವಕುಮಾರ

ಬೆಳಗಾವಿ: ಆಪರೇಷನ್ ಕಮಲಕ್ಕೆ ಸಂಬಂಧಪಟ್ಟಂತೆ 'ನನಗೆ ಹಣದ ಆಫರ್ ಬಂದಿತ್ತು' ಎಂದು ಹೇಳಿರುವ ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಹೇಳಿಕೆಯನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಸ್ವಾಗತಿಸಿದ್ದು, ತಡವಾಗಿಯಾದರೂ ಸತ್ಯ ನುಡಿದಿದ್ದಕ್ಕೆ ಅವರನ್ನು ಅಭಿನಂದಿಸಿದ್ದಾರೆ.
ನಿನ್ನೆಯಷ್ಟೇ ಕಾಗವಾಡ ತಾಲೂಕಿನ ಐನಾಪೂರದಲ್ಲಿ ಮಾತನಾಡಿದ್ದ ಶ್ರೀಮಂತ ಪಾಟೀಲ, ಕಾಂಗ್ರೆಸ್ ತೊರೆದು ಬರಲು ಬಿಜೆಪಿ ಬೇಕಾದಷ್ಟು ಹಣ ಕೊಡುವ ಬಗ್ಗೆ ಆಫರ್ ಕೊಟ್ಟಿತ್ತು. ‌ಆದರೆ ನಾನು ಹಣದ ಪಡೆಯಲಿಲ್ಲ. ಬದಲಾಗಿ‌ ಒಳ್ಳೆಯ ಖಾತೆ ಬೇಕೆಂದು ಕೇಳಿದ್ದೆ ಎಂದು ಹೇಳಿದ್ದರು. 
ಇದಕ್ಕೆ ಪ್ರತಿಕ್ರಿಯಿಸಿದ ಶಿವಕುಮಾರ, ಇದೊಂದು ಗಂಭೀರ ಪ್ರಕರಣವಾಗಿದ್ದು, ಭ್ರಷ್ಟಾಚಾರ ನಿಗ್ರಹ ದಳವು ಈ ಪ್ರಕರಣವನ್ನು ಸ್ವಯಂ ದೂರು ದಾಖಲಿಸಿಕೊಂಡು ತನಿಖೆ ನಡೆಸಬೇಕು ಎಂದು‌‌ ಆಗ್ರಹಿಸುತ್ತೇವೆ. ಅಧಿವೇಶನದಲ್ಲಿಯೂ ಇದರ ಬಗ್ಗೆ ಪ್ರಸ್ತಾಪ ಮಾಡುತ್ತೇವೆ. ಬಿಜೆಪಿಯು ಶುದ್ಧ ಆಡಳಿತ ನಡೆಸಲು ಬಂದಿರುವುದಾಗಿ‌ ಆಗಾಗ ಹೇಳುತ್ತದೆ. ಆದರೆ ಶ್ರೀಮಂತ ಪಾಟೀಲ‌ ಹೇಳಿಕೆಯಿಂದ ಸತ್ಯ ಬಯಲಾಗಿದೆ ಎಂದರು.
ಬೆಳಗಾವಿ ಪಾಲಿಕೆಯ ಸೋಲಿನ ಬಗ್ಗೆ ಮಾತನಾಡಿದ ಅವರು, ಕಾಂಗ್ರೆಸ್ಸಿನ ಮತಗಳಲ್ಲಿ ಕಡಿಮೆ ಏನೂ ಆಗಿಲ್ಲ. ಆದರೆ ಗೆಲ್ಲುವ ಸೀಟುಗಳಲ್ಲಿ ಕಡಿಮೆಯಾಗಿವೆ. ಈ‌ ಬಗ್ಗೆ ಎಐಸಿಸಿ ಸತ್ಯಾಶೋಧನಾ ತಂಡದ ವತಿಯಿಂದ ಆಂತರಿಕ ತನಿಖೆ ನಡೆಸಲಾಗುವುದು ಎಂದು ಶಿವಕುಮಾರ ಹೇಳಿದರು.
ನಾಳೆಯಿಂದ ವಿಧಾನಮಂಡಲ ಅಧಿವೇಶನ ಆರಂಭಗೊಳ್ಳುತ್ತಿದ್ದು, ದೇಶದಲ್ಲಿ ಪೆಟ್ರೋಲ್ ಮತ್ತು ಡೀಜೆಲ್ ನಲ್ಲಾಗಿರುವ ಬೆಲೆ‌ ಏರಿಕೆಯನ್ನು ಖಂಡಿಸಿ, ಕಾಂಗ್ರೆಸ್ ನಾಯಕರು ಎತ್ತಿನ ಬಂಡಿ ಹತ್ತಿ ವಿಧಾನಸೌಧಕ್ಕೆ‌‌ ಹೋಗುವ ಮೂಲಕ ವಿಶಿಷ್ಠ ರೀತಿಯಲ್ಲಿ ಪ್ರತಿಭಟನೆ ದಾಖಲಿಸುವುದಾಗಿ ಅವರು ತಿಳಿಸಿದರು.