ಬೆಳಗಾವಿ ಪಾಲಿಕೆ ಚುನಾವಣೆ: ಮತದಾರರ ಓಲೈಸುವ ಕೊನೆ ಕಸರತ್ತು ಜೋರು

ಬೆಳಗಾವಿ ಪಾಲಿಕೆ ಚುನಾವಣೆ: ಮತದಾರರ ಓಲೈಸುವ ಕೊನೆ ಕಸರತ್ತು ಜೋರು

ಬೆಳಗಾವಿ ಮಹಾನಗರ ಪಾಲಿಕೆಯ 58 ವಾರ್ಡ್‌ಗಳಿಗೆ ಸೆಪ್ಟೆಂಬರ್ 3ರಂದು  ಚುನಾವಣೆ ಮತದಾ‌ನ ನಡೆಯಲಿದೆ. ಬಹಿರಂಗ ಪ್ರಚಾರಕ್ಕೆ  ಬುಧವಾರವೇ ತೆರೆ ಬಿದ್ದಿದ್ದು, ಅಭ್ಯರ್ಥಿಗಳು ಮತದಾರರನ್ನು ತಲುಪಲು ಕೊನೆ ಹಂತದ ಪ್ರಯತ್ನಗಳನ್ನು ಚುರುಕುಗೊಳಿಸಿದ್ದಾರೆ.

 ಇನ್ನೊಂದು ಕಡೆ ಜಿಲ್ಲಾಡಳಿತ ಸುಸೂತ್ರ, ನ್ಯಾಯಸಮ್ಮತ ಚುನಾವಣೆ ನಡೆಸಲು ಸಿದ್ಧತೆ ಕೈಗೊಂಡಿದೆ.
ಪ್ರಚಾರಕ್ಕೆ ಬಂದಿದ್ದ 
ವಿವಿಧ ಪಕ್ಷಗಳ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ನಾಯಕರು ನಗರವನ್ನು ತೊರೆದಿದ್ದಾರೆ. ಸ್ಥಳೀಯ ಶಾಸಕರು, ಮಾಜಿ ಶಾಸಕರು, ಚುನಾವಣಾ ಉಸ್ತುವಾರಿಗಳ ಮಾರ್ಗದರ್ಶನದಲ್ಲಿ ಮತದಾರರನ್ನು ತಲುಪುವ ಕಾರ್ಯ ಜಾರಿಯಲ್ಲಿದೆ. 
 ಮುಖಂಡರು, ಸಮುದಾಯದ ಮುಖಂಡರನ್ನು ಭೇಟಿ ಮಾಡಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಮನವಿ ಮಾಡಲಾಗುತ್ತಿದೆ. 
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ತೆರೆಯಲಾಗಿರುವ  ಬೂತ್‌ಗಳ ವ್ಯಾಪ್ತಿಯಲ್ಲಿ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌  ಆಮ್  ಆದ್ಮಿ ಮತ್ತಿತರ ಪಕ್ಷಗಳು  ಚುನಾವಣೆ  ಕಾರ್ಯಕ್ಕೆ ಕಾರ್ಯಕರ್ತರನ್ನು ನಿಯೋಜಿಸುತ್ತಿದ್ದಾರೆ.
ಇನ್ನು ಮತಗಟ್ಟೆ ಏಜೆಂಟರ ಪಟ್ಟಿಯನ್ನು ಆಯಾ ವಾರ್ಡುಗಳ ಚುನಾವಣಾಧಿಕಾರಿಗಳಿಗೆ ಸಲ್ಲಿಸಲಾಗಿದೆ. ಮಾದರಿ ಮತಪತ್ರವನ್ನು ಸಿದ್ಧಪಡಿಸಿಕೊಳ್ಳಲಾಗಿದೆ.  ಮತದಾರರ ಮನವೊಲಿಸಲು ಕೊನೆ ಹಂತದ ಪ್ರಯತ್ನಗಳು ಜಾರಿಯಲ್ಲಿದ್ದು, 
ಮೊಬೈಲ್‌, ವಾಟ್ಸ್‌ಆ್ಯಪ್,  ಕರಪತ್ರಗಳ ಮೂಲಕ ಮತದಾರರನ್ನು ತಲುಪಲು ಪ್ರಯತ್ನಗಳು ನಡೆಯುತ್ತಿವೆ.  
ಪ್ರತಿ ವಾರ್ಡ್‌ನಲ್ಲಿ ಅಂದಾಜು  10 ಸಾವಿರ ಮತದಾರರಿದ್ದಾರೆ.    ಮತಗಟ್ಟೆಗೆ ಜನರನ್ನು ಕರೆತರಲು ಹಲವೆಡೆ ಜೀಪ್, ಆಟೊ  ವ್ಯವಸ್ಥೆ ಮಾಡುವಲ್ಲೂ ಅಭ್ಯರ್ಥಿಗಳು ಹಿಂದೆ ಬಿದ್ದಿಲ್ಲ.  ಪಕ್ಷಗಳ ಅಭ್ಯರ್ಥಿಗಳ ಚುನಾವಣಾ ಕಚೇರಿಗಳು ಬ್ಯೂಸಿಯಾಗಿವೆ. 
 ಚುನಾವಣೆ ನಿಮಿತ್ಯ  ಕಮಿಷನರೆಟ್‌ ವ್ಯಾಪ್ತಿಯಲ್ಲಿ ಪೊಲೀಸ್ ಇಲಾಖೆಯೂ ಬಂದೋವಸ್ತ್ ವ್ಯವಸ್ಥೆ ಮಾಡಿದೆ. 
 ಒಂದು ಸಾವಿರಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ ಪಥ ಸಂಚಲನ ನಡೆಸಿ ಜನರಲ್ಲಿ ಧೈರ್ಯ ತುಂಬಿದೆ.
 ಮತದಾರರಿಗೆ ಮತ ಚಲಾಯಿಸಲು ಅನುಕೂಲವಾಗುವಂತೆ ವಾರ್ಡ ಗಳ ವ್ಯಾಪ್ತಿಯ ರಾಜ್ಯ ಸರ್ಕಾರಿ ಕಚೇರಿಗಳು, ಶಾಲೆ ಕಾಲೇಜುಗಳು  ಹಾಗೂ ಸರ್ಕಾರಿ ಸ್ವಾಮ್ಯದ ಅಂಗ ಸಂಸ್ಥೆಗಳಿಗೆ ಸೆಪ್ಟೆಂಬರ್ 3ರಂದು  ಸಾರ್ವತ್ರಿಕ ರಜೆ  ಘೋಷಿಸಲಾಗಿದೆ.