ಸುವರ್ಣ ಸೌಧಕ್ಕೆ ಒಂದು ಸ್ವರೂಪ ಕೊಡುತ್ತೇನೆ: ಆಶೋಕ ಚಂದರಗಿ ನೇತೃತ್ವದ ನಿಯೋಗಕ್ಕೆ ಮುಖ್ಯಮಂತ್ರಿ ಭರವಸೆ

ಸುವರ್ಣ ಸೌಧಕ್ಕೆ ಒಂದು ಸ್ವರೂಪ ಕೊಡುತ್ತೇನೆ: ಆಶೋಕ ಚಂದರಗಿ ನೇತೃತ್ವದ ನಿಯೋಗಕ್ಕೆ ಮುಖ್ಯಮಂತ್ರಿ ಭರವಸೆ

ಬೆಳಗಾವಿ:  “ಬೆಳಗಾವಿಯ ಸುವರ್ಣ ಸೌಧಕ್ಕೆ ಒಂದು ರೂಪವನ್ನು ಕೊಟ್ಟೇ ಕೊಡುತ್ತೇನೆ. ಈ ಬಗ್ಗೆ ಕೆಲವೊಂದು ಮಹತ್ವದ ನಿರ್ಧಾರಗಳನ್ನುಕೈಗೊಳ್ಳಲು ತೀರ್ಮಾನಿಸಿದ್ದೇನೆ" ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ನೇತೃತ್ವದ ನಿಯೋಗಕ್ಕೆ ಭರವಸೆ ನೀಡಿದ್ದಾರೆ.

 

ಭಾನುವಾರ ಸಂಜೆ ಬೆಂಗಳೂರಿನ ಆರ್.ಟಿ.ನಗರದ ತಮ್ಮ ನಿವಾಸದಲ್ಲಿ ತಮ್ಮನ್ನು ಭೇಟಿಯಾದ ಚಂದರಗಿ ಅವರಿಗೆ ಮುಖ್ಯಮಂತ್ರಿ ಈ ಭರವಸೆ ನೀಡಿದ್ದಾರೆ. ಗಡಿ ಅಭಿವೃದ್ಧಿ ಪ್ರಾಧಿಕಾರ,ಗಡಿ ಸಂರಕ್ಷಣಾ ಆಯೋಗ,ಸುವರ್ಣ ಸೌಧಕ್ಕೆ ಪ್ರಮುಖ ಕಚೇರಿಗಳ ಸ್ಥಳಾಂತರ ಹಾಗೂ ಮುಂಬಯಿ ಕರ್ನಾಟಕಕ್ಕೆ ಕಿತ್ತೂರು ಕರ್ನಾಟಕ ಎಂದು ಮರು ನಾಮಕರಣ ಮಾಡುವ ಕುರಿತು ನಿಯೋಗವು ಬೊಮ್ಮಾಯಿ ಅವರೊಂದಿಗೆ ಚರ್ಚಿಸಿತು.

 

2006 ರ ಫೆಬ್ರುವರಿ 16 ರಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ 2014 ರ ಅಕ್ಟೋಬರ 14 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನ ಸೌಧದಲ್ಲಿ ನಾಡು,ನುಡಿ ಹಾಗೂ ಗಡಿಗೆ ಸಂಬಂಧಿಸಿದಂತೆ ಕನ್ನಡ ಪರ ಹೋರಾಟಗಾರರ, ಚಿಂತಕರ ಸಭೆ ಕರೆದಿದ್ದರು. ತಾವೂ ಸಹ ಬೆಳಗಾವಿಯ ಸುವರ್ಣ ಸೌಧದಲ್ಲಿ ಇಂಥ ಸಭೆಯನ್ನು ಕರೆಯಬೇಕೆಂದು ಅಶೋಕ ಚಂದರಗಿ ಬೊಮ್ಮಾಯಿ ಅವರನ್ನು ಆಗ್ರಹಿಸಿದರು.

 

ಮುಂದಿನ ಅಕ್ಟೋಬರ 23ರ ಕಿತ್ತೂರು ಚೆನ್ನಮ್ಮ ರಾಣಿಯ ವಿಜಯೋತ್ಸವದ ಮುನ್ನವೇ ಮುಂಬಯಿ ಕರ್ನಾಟಕಕ್ಕೆ ಕಿತ್ತೂರು ಕರ್ನಾಟಕ ಎಂದು ನಾಮಕರಣ ಮಾಡಬೇಕೆಂದು ಅಶೋಕ ಚಂದರಗಿ ಮನವಿ ಮಾಡಿದರು. ನಿಯೋಗದಲ್ಲಿ ಮೈನೋದ್ದೀನ್ ಮಕಾನದಾರ, ಶಿವಪ್ಪ ಶಮರಂತ, ಹರೀಶ ಕರಿಗೊನ್ನವರ, ವಿರೇಂದ್ರ ಗೋಬರಿ ಮೊದಲಾದವರು

ಇದ್ದರು.