ಬೆಳಗಾವಿಯಲ್ಲಿ ಬಿಜೆಪಿಗೆ ಭಾರೀ ಮುಖಭಂಗ; ಭದ್ರಕೋಟೆಯಲ್ಲಿಯೇ ಮುಗ್ಗರಿಸಿದ ಕಮಲ  

ಬೆಳಗಾವಿಯಲ್ಲಿ ಬಿಜೆಪಿಗೆ ಭಾರೀ ಮುಖಭಂಗ; ಭದ್ರಕೋಟೆಯಲ್ಲಿಯೇ ಮುಗ್ಗರಿಸಿದ ಕಮಲ   

 

ಬೆಳಗಾವಿ: ಭದ್ರಕೋಟೆಯಾದ ಬೆಳಗಾವಿ ಜಿಲ್ಲೆಯಲ್ಲಿಯೇ ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಸೋಲು ಅನುಭವಿಸಿದ್ದು, ಪಕ್ಷವನ್ನು ಭಾರೀ ಮುಜುಗರಕ್ಕೆ ಈಡು ಮಾಡಿದೆ. ಎರಡನೇ ಸುತ್ತಿನ ಮತ ಎಣಿಕೆಯಲ್ಲಿ ಕವಟಗಿಮಠ ಅವರು ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ವಿರುದ್ಧ 226 ಮತಗಳ ಅಂತರದಿಂದ ಸೋಲು ಕಂಡಿದ್ದಾರೆ.

 

ಜಿಲ್ಲೆಯಲ್ಲಿ ಬಿಜೆಪಿಯ 13 ಮಂದಿ ಶಾಸಕರು, ಇಬ್ಬರು ಸಚಿವರು, ಇಬ್ಬರು ಲೋಕಸಭಾ ಸದಸ್ಯರು ಹಾಗೂ ಒಬ್ಬ ರಾಜ್ಯಸಭಾ ಸದಸ್ಯ ಇದ್ದಾರೆ. ಜಿಲ್ಲೆಯಲ್ಲಿ ಪರಿಷತ್ತಿನ ಎರಡು ಸ್ಥಾನಗಳಿದ್ದರೂ ಒಂದೇ ಸ್ಥಾನಕ್ಕೆ ಅಭ್ಯರ್ಥಿಯನ್ನು ನಿಲ್ಲಿಸಿ ಅತ್ಯಂತ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಿಕೊಂಡು ಬರಲು ಪಕ್ಷ ಯೋಜನೆ ಹಾಕಿಕೊಂಡಿತ್ತು. ಆದರೆ ನಿಲ್ಲಿಸಿದ್ದ ಒಬ್ಬ ಅಭ್ಯರ್ಥಿಯನ್ನೂ ಗೆಲ್ಲಿಸಿಕೊಳ್ಳಲು ಆಗಿಲ್ಲ. ಹೀಗಾಗಿ ಕಮಲ ಪಾಳಯ ಭಾರೀ ಮುಖಭಂಗಕ್ಕೆ ಈಡಾಗಿದೆ.

 

ಪಕ್ಷದ ವತಿಯಿಂದ ಜಿಲ್ಲೆಯ ಬಹುತೇಕ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿ ಪರವಾಗಿ ಪ್ರಚಾರ ನಡೆಸಲಾಗಿತ್ತು. ಪಕ್ಷದ ಪ್ರಮುಖರು, ಶಾಸಕರು, ಸಚಿವರು, ಸಂಸತ್ ಸದಸ್ಯರು ಎಲ್ಲರೂ ಪ್ರಚಾರ ಸಭೆಗಳಲ್ಲಿ ಭಾಗವಹಿಸಿ ಭಾಷಣ ಮಾಡಿದ್ದರು. ಬಿಜೆಪಿ ಅಭ್ಯರ್ಥಿ ಕವಟಗಿಮಠ ಅವರ ಗೆಲುವು ಶತಸಿದ್ಧ ಎಂದು ಘೋಷಿಸಿದ್ದರು. ಆದರೆ ಎಲ್ಲ ಲೆಕ್ಕಾಚಾರಗಳೂ ತಲೆಕೆಳಗಾಗಿವೆ.

 

ಯಾವ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಗೆ ಎಷ್ಟು ಮತಗಳು ಬಂದಿವೆ. ಪ್ರಥಮ ಪ್ರಾಶಸ್ತ್ಯದ ಮತಗಳು ಎಷ್ಟು ಬಂದಿವೆ ಮತ್ತು ದ್ವಿತೀಯ ಪ್ರಾಶಸ್ತ್ಯದ ಮತಗಳು ಎಷ್ಟು ಬಂದಿವೆ ಎನ್ನುವುದು ಇನ್ನಷ್ಟೇ ಗೊತ್ತಾಗಬೇಕಿದೆ. ಅದು ಗೊತ್ತಾದ ಬಳಿಕ ಬಿಜೆಪಿಯ ಯಾವ ಶಾಸಕ ಎಷ್ಟು ನಿಷ್ಠೆಯಿಂದ ಪಕ್ಷದ ಅಭ್ಯರ್ಥಿ ಪರವಾಗಿ ಕೆಲಸ ಮಾಡಿದ್ದಾರೆ, ಯಾರು ದ್ರೋಹ ಮಾಡಿದ್ದಾರೆ ಎನ್ನುವುದು ಗೊತ್ತಾಗಲಿದೆ. ಎಲ್ಲರ ಮುಖವಾಡಗಳೂ ಬಯಲಾಗಲಿವೆ.

 

ಎಲ್ಲರ ದೃಷ್ಟಿ ಈಗ ಶಾಸಕರಾದ ರಮೇಶ ಜಾರಕಿಹೊಳಿ ಮತ್ತು ಬಾಲಚಂದ್ರ ಜಾರಕಿಹೊಳಿ ಮೇಲೆ ನೆಟ್ಟಿದ್ದು, ಪಕ್ಷವು ಅವರ ಮೇಲೆ ಶಿಸ್ತುಕ್ರಮ ಕೈಗೊಳ್ಳಲಿದೆ ಎನ್ನುವ ಚರ್ಚೆಗಳು ನಡೆದಿವೆ. ಜೊತೆಗೆ ಪಕ್ಷದ ಅಭ್ಯರ್ಥಿ ಪರವಾಗಿ ಕೆಲಸ ಮಾಡದ ಇತರೆ ಶಾಸಕರ ಮೇಲೆ ಪಕ್ಷ ಏನು ಕ್ರಮ ಕೈಗೊಳ್ಳುತ್ತದೆ ಎನ್ನುವುದನ್ನು ಕಾದು ನೋಡಬೇಕಾಗಿದೆ.