ಬೆಂಗಳೂರಿನಲ್ಲಿ ‌ಸಾರ್ವಜನಿಕ ಗಣೇಶೋತ್ಸವಕ್ಕೆ ಅವಕಾಶವಿಲ್ಲ; ದೇವಸ್ಥಾನಗಳಲ್ಲಿ ಮಾತ್ರ ಮೂರ್ತಿ ಪ್ರತಿಷ್ಠಾಪಿಸಬಹುದು

ಬೆಂಗಳೂರಿನಲ್ಲಿ ‌ಸಾರ್ವಜನಿಕ ಗಣೇಶೋತ್ಸವಕ್ಕೆ ಅವಕಾಶವಿಲ್ಲ; ದೇವಸ್ಥಾನಗಳಲ್ಲಿ ಮಾತ್ರ ಮೂರ್ತಿ ಪ್ರತಿಷ್ಠಾಪಿಸಬಹುದು
 
 

ಬೆಂಗಳೂರು:  ಕೋವಿಡ್‌ ನಿಯಮಗಳು ಜಾರಿಯಲ್ಲಿ ಇರುವುದರಿಂದ ಈ ಬಾರಿ ಬೆಂಗಳೂರಿನಲ್ಲಿ ‌ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶವಿಲ್ಲ. ಆದರೆ ಸಾರ್ವಜನಿಕ ದೇವಸ್ಥಾನಗಳಲ್ಲಿ ಗಣೇಶ ‌ಮೂರ್ತಿಯನ್ನು ಪ್ರತಿಷ್ಠಾಪಿಸಬಹುದು ಎಂದು‌ ಬೆಂಗಳೂರು ಪೊಲೀಸ್ ‌ಕಮಿಷನರ್ ಕಮಲ್ ಪಂತ್ ಹೇಳಿದ್ದಾರೆ.


 

ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದ ಅವರು, 'ರಾಜ್ಯ‌ ಸರ್ಕಾರದ ನಿಯಮಗಳನ್ವಯ ಸಾರ್ವಜನಿಕ ದೇವಸ್ಥಾನಗಳಲ್ಲಿ ಮೂರ್ತಿ ಪ್ರತಿಷ್ಠಾಪಿಸಲು ಅವಕಾಶವಿದೆ. ಉಳಿದಂತೆ‌, ಕೋವಿಡ್ ನಿಯಮಗಳು‌ ಜಾರಿಯಲ್ಲಿ ಇರಲಿವೆ. ಉಲ್ಲಂಘಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು' ಎಂದರು.

'ಸದ್ಯದ ನಿಯಮಗಳ ಪ್ರಕಾರ, ಸಾರ್ವಜನಿಕ ರಸ್ತೆಯಲ್ಲಿ ಮೂರ್ತಿ‌ ಪ್ರತಿಷ್ಠಾಪನೆಗೆ ಯಾವುದೇ ಅವಕಾಶ ನೀಡಿಲ್ಲ' ಎಂದೂ ಅವರು ತಿಳಿಸಿದರು.' ದೇವಸ್ಥಾನದಲ್ಲಿ‌ ಮೂರ್ತಿ ಪ್ರತಿಷ್ಠಾಪನೆಗೂ‌‌ ಮುನ್ನ ಪೊಲೀಸರು ಹಾಗೂ‌ ಬಿಬಿಎಂಪಿ ಅವರಿಂದ ಅನುಮತಿ‌ ಪಡೆಯಬೇಕು' ಎಂದೂ‌ ಅವರು ಹೇಳಿದರು.

ಬೆಳಗಾವಿ, ಹುಬ್ಬಳ್ಳಿ ಸೇರಿದಂತೆ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಿಂದ ಸಾರ್ವಜನಿಕ ಗಣೇಶೋತ್ಸವಕ್ಕೆ ಅವಕಾಶ ನೀಡಬೇಕು ಎಂದು ಹಿಂದೂ ಸಂಘಟನೆಗಳು ಮತ್ತು ಬಿಜೆಪಿಯ ಮುಖಂಡರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಬೇಡಿಕೆಯ ಕುರಿತಂತೆ ಸಪ್ಟೆಂಬರ್ 6 ರಂದು ನಿರ್ಧಾರ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದ್ದಾರೆ.