ಹಲವು ಬೇಡಿಕೆಗಳ ಇಡೇರಿಕೆಗೆ ಆಗ್ರಹಿಸಿ ಬೆಳಗಾವಿ ಪತ್ರಕರ್ತರ ಸಂಘದಿಂದ ಮುಖ್ಯಮಂತ್ರಿಗೆ ಮನವಿ

ಹಲವು ಬೇಡಿಕೆಗಳ ಇಡೇರಿಕೆಗೆ ಆಗ್ರಹಿಸಿ ಬೆಳಗಾವಿ ಪತ್ರಕರ್ತರ ಸಂಘದಿಂದ ಮುಖ್ಯಮಂತ್ರಿಗೆ ಮನವಿ

 

 


ಬೆಳಗಾವಿ: ಪತ್ರಕರ್ತರ ಹಲವಾರು ಬೇಡಿಕೆಗಳನ್ನು ಇಡೇರಿಸುವಂತೆ ಆಗ್ರಹಿಸಿ ಬೆಳಗಾವಿ ಪತ್ರಕರ್ತರ ಸಂಘದ ವತಿಯಿಂದ ಸಂಘದ ಅಧ್ಯಕ್ಷ ಶ್ರೀಶೈಲ ಮಠದ ನೇತೃತ್ವದಲ್ಲಿ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಲಾಯಿತು.

 

 

ದಶಕಗಳಿಂದಲೂ ಬೆಳಗಾವಿ ಜಿಲ್ಲೆಯ ಪತ್ರಕರ್ತರು ಕಾರ್ಯದಕ್ಷತೆ ಯಿಂದ ಸೇವೆ ಸಲ್ಲಿಸುತ್ತ ಬರುತ್ತಿದ್ದಾರೆ. ಜಾಗತಿಕ ಬದಲಾವಣೆಯ ಪರಿಸ್ಥಿಯಲ್ಲಿ ಪರ್ತಕರ್ತರೂ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಕುರಿತು ಈಗಾಗಲೇ ಸಾಕಷ್ಟು ಬಾರಿ ಸರಕಾರದ ಗಮನಕ್ಕೆ ತಂದಿದ್ದರೂ ಪ್ರಯೋಜನವಾಗಿಲ್ಲ. ಇಂತಹ ಪರಿಸ್ಥಿಯಲ್ಲಿ ಪತ್ರಕರ್ತರ ಸಮಸ್ಯೆಗಳಿಗೆ ಪರಿಹಾರವಾಗಿ ಸಹಾಯ, ಸೌಲಭ್ಯಗಳ ಅವಶ್ಯಕತೆ ಇದೆ. ಸಾಮಾಜಿಕ ನ್ಯಾಯ ಕಲ್ಪಿಸುವಲ್ಲಿ ದೂರದೃಷ್ಟಿ ಹೊಂದಿರುವ ಮುಖ್ಯಮಂತ್ರಿಗಳು ಪತ್ರಕರ್ತರ ಕೆಳಗಿನ ಬೇಡಿಕೆಗಳಿಗೆ ಸ್ಪಂದಿಸಬೇಕೆಂದು ಮನವಿ ಮಾಡಿಕೊಳ್ಳಲಾಗಿದೆ. ಪತ್ರಕರ್ತರ ಬೇಡಿಕೆಗಳು ಹೀಗಿವೆ-

 

 

  1. ಬೆಳಗಾವಿ ಜಿಲ್ಲಾಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಾನ್ಯತೆ ಪಡೆದ ಪತ್ರಿಕೆಗಳ ಪತ್ರಕರ್ತರು ಹಲವು ವರ್ಷಗಳಿಂದ ಉತ್ತಮ ಸಮಾಜ ನಿರ್ಮಾಣಕ್ಕೆ ಹಾಗೂ ಏಳ್ಗೆಗಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನಗರಾಭಿವೃದ್ಧಿ ಪ್ರಾಧಿಕಾರದ ಪ್ರಸ್ತಾಪಿತ ಬಡಾವಣೆಯಲ್ಲಿ ಪತ್ರಕರ್ತರಾಗಿ ಅತ್ಯಂತ ಕನಿಷ್ಠ ಬೆಲೆಯಲ್ಲಿ ನಿವೇಶನ ಮೀಸಲಿಟ್ಟು, ಹಂಚಿಕೆ ಮಾಡಬೇಕು.

 

 

  1. ಬೆಳಗಾವಿ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ನಕಲಿ ಪತ್ರಕರ್ತರ ಹಾವಳಿ ಹೆಚ್ಚಿದೆ. ನಕಲಿ ಪತ್ರಕರ್ತರಿಂದ ಸಮಾಜ ಸ್ವಾಸ್ಥ್ಯ ಹಾಳಾಗುತ್ತಿದೆ. ಅಲ್ಲದೇ ಸರ್ಕಾರಿ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ಬೆದರಿಕೆ ಹಾಗೂ ಹಣ ನೀಡುವಂತೆ ಬ್ಲ್ಯಾಕ್ ಮೇಲ್ ಮಾಡುತ್ತಿರುವ ಪ್ರಕರಣಗಳು ಹಾಗೂ ಹನಿ ಟ್ರ್ಯಾಪ್ ಪ್ರಕರಣಗಳಲ್ಲಿ ಭಾಗಿಯಾಗಿರುವ ದಾಖಲಾದ ಹಲವಾರು ಪ್ರಕರಣಗಳ ಮೂಲಕ ಬೆಳಕಿಗೆ ಬಂದಿವೆ. ಇಂತಹ ಕರಾಳ ಕೃತ್ಯಗಳಿಂದಾಗಿ ನೈತಿಕವಾಗಿ ಕಾರ್ಯನಿರ್ವಹಿಸುವ ಪತ್ರಕರ್ತರಿಗೆ ಮುಜುಗರ ಆಗುವುದಲ್ಲದೇ, ಸಂವಿಧಾನದ ನಾಲ್ಕನೇ ಅಂಗ ಎಂದು ಕರೆಯಲ್ಪಡುವ ಮಾಧ್ಯಮ ಕ್ಷೇತ್ರ ಸಮಾಜದ ವಿಶ್ವಾಸಾರ್ಹತೆ ಕಳೆದುಕೊಳ್ಳುತ್ತಿದೆ. ಆದ್ದರಿಂದ ಸರ್ಕಾರದಿಂದ ಮಾನ್ಯತೆ ಪಡೆದ ಮಾಧ್ಯಮ ಸಂಸ್ಥೆಗಳ ಸಿಬ್ಬಂದಿ ಹೊರತುಪಡಿಸಿ, ಪತ್ರಕರ್ತರು ಎಂದು ಹೇಳಿಕೊಂಡು ಓಡಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಜತೆಗೆ ವಂಚನೆ ಪ್ರಕರಣ ದಾಖಲಿಸುವುದರೊಂದಿಗೆ ಜಿಲ್ಲೆಯಿಂದ ಗಡಿಪಾರು ಮಾಡಲು ಜಿಲ್ಲಾಧಿಕಾರಿಗಳಿಗೆ ಹಾಗೂ ಪೊಲೀಸ್ ಇಲಾಖೆಗೆ ಸೂಚನೆ ನೀಡಬೇಕು.

 

 

  1. ಬೆಳಗಾವಿ ಪತ್ರಕರ್ತರ ಸಂಘವು ಜಿಲ್ಲಾ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರ ಕ್ಷೇಮಾಭಿವೃದ್ಧಿಗೆ ಕಾರ್ಯನಿರ್ವಹಿಸುತ್ತಿದ್ದು, ಸಂಘಕ್ಕೆ ಸ್ವಂತ ಕಚೇರಿ ಹಾಗೂ ಜಾಗ ಇಲ್ಲದೆ ಇರುವುದರಿಂದ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಆದ್ದರಿಂದ ಸಂಘಕ್ಕೆ ಜಾಗ ನೀಡುವ ಪ್ರಸ್ತಾವನೆ ಈಗಾಗಲೇ ಜಿಲ್ಲಾಧಿಕಾರಿಗಳ ಹಂತದಲ್ಲಿದೆ. ಆದ್ದರಿಂದ ಆದ್ಯತೆ ಮೇರೆಗೆ ಬೆಳಗಾವಿ ಪತ್ರಕರ್ತರ ಸಂಘಕ್ಕೆ ಜಾಗ ಮಂಜೂರು ಮಾಡಲು ಕ್ರಮ ಕೈಗೊಳ್ಳಬೇಕು.

 

 

4.ಕಾರ್ಯನಿರತ ಪತ್ರಕರ್ತರು ಅಪಘಾತ ಅಥವಾ ಅಕಾಲಿಕ ಮರಣ ಹೊಂದಿದ್ದಲ್ಲಿ. ಅವರ ಅವಲಂಬಿತ ಕುಟುಂಬಕ್ಕೆ ಕನಿಷ್ಟ 25 ಲಕ್ಷ ರುಪಾಯಿ ಪರಿಹಾರ ನೀಡಬೇಕು. ಅಲ್ಲದೇ ಅಪಘಾತದಲ್ಲಿ ಅಂಗವೈಕಲ್ಯ ಹೊಂದಿದ್ದಲ್ಲಿ  ಕನಿಷ್ಟ 10 ರುಪಾಯಿ ಲಕ್ಷ ಪರಿಹಾರ ನೀಡುವುದಾಗಬೇಕು.

 

 

  1. ಪತ್ರಕರ್ತರ ಪ್ರತಿಭಾವಂತ ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಧನ ಸಹಾಯ ಮಾಡಬೇಕು

 

 

ಈ ಸಂದರ್ಭದಲ್ಲಿ ಪತ್ರಕರ್ತರಾದ ಶ್ರೀಶೈಲ ಮಠದ, ಮಹೇಶ ಬಿಜಾಪುರೆ, ಮಂಜುನಾಥ ಕೋಳಿಗುಡ್ಡ, ಸುರೇಶ ನೇರ್ಲಿ ಮೊದಲಾದವರು ಉಪಸ್ಥಿತರಿದ್ದರು.