ಪರಿಷತ್ ಚುನಾವಣೆ; ದೂರುಗಳಿಗೆ ತಕ್ಷಣವೇ ಸ್ಪಂದಿಸಲು ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ್ ಸೂಚನೆ

ಪರಿಷತ್ ಚುನಾವಣೆ; ದೂರುಗಳಿಗೆ ತಕ್ಷಣವೇ ಸ್ಪಂದಿಸಲು ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ್ ಸೂಚನೆ

ಬೆಳಗಾವಿ : ಪ್ರತಿ ಚುನಾವಣೆಯೂ ಮಹತ್ವದ್ದಾಗಿರುತ್ತದೆ.. ಆದ್ದರಿಂದ ಯಾವುದೇ ಲೋಪದೋಷಗಳಿಲ್ಲದೇ ಚುನಾವಣಾ ಆಯೋಗದ ಮಾರ್ಗಸೂಚಿ ಪ್ರಕಾರ ಸುಗಮವಾಗಿ ನಡೆಸುವ ನಿಟ್ಟಿನಲ್ಲಿ ಜಾಗರೂಕತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿಯೂ ಆಗಿರುವ ಜಿಲ್ಲಾ ಚುನಾವಣಾಧಿಕಾರಿ ಆರ್.ವೆಂಕಟೇಶಕುಮಾರ್ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.


ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಬುಧವಾರ (ನ.17) ನಡೆದ ಚುನಾವಣಾ ನೋಡಲ್ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.


ಮತದಾನ ಹಾಗೂ ಮತ ಎಣಿಕೆಯನ್ನು ಯಾವುದೇ ಕಾರಣಕ್ಕೂ ಹಗುರವಾಗಿ ಪರಿಗಣಿಸಬಾರದು. ಪ್ರಕ್ರಿಯೆಗಳ ಕುರಿತು ಯಾವುದೇ ಗೊಂದಲಗಳಿದ್ದರೆ ತರಬೇತಿ ಸಂದರ್ಭದಲ್ಲಿಯೇ ತಮ್ಮ ಸಂದೇಹಗಳನ್ನು ಪರಿಹರಿಸಿಕೊಳ್ಳಬೇಕು.


ಚುನಾವಣೆಗೆ ನಿಯೋಜಿಸಲಾದ ಎಲ್ಲ ತಂಡಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕು. ನೀತಿಸಂಹಿತೆಗೆ ಸಂಬಂಧಿಸಿದಂತೆ ಯಾವುದೇ ದೂರುಗಳು ಬಂದಾಗ ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು

ಕೋವಿಡ್ ಮಾರ್ಗಸೂಚಿ ಪಾಲನೆಗೆ ಸೂಚನೆ:

ಪ್ರಚಾರ ಸಭೆ ಸಂದರ್ಭಗಳಲ್ಲಿ ಕೋವಿಡ್ ಮಾರ್ಗಸೂಚಿ ಪಾಲಿಸುವುದು ಕಡ್ಡಾಯವಾಗಿರುತ್ತದೆ. ಈ ಬಗ್ಗೆಯೂ ಸಂಬಂಧಿಸಿದ ಅಧಿಕಾರಿಗಳು ನಿಗಾ ವಹಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಆರ್.ವೆಂಕಟೇಶಕುಮಾರ್ ಅವರು ತಿಳಿಸಿದರು.

ಒಟ್ಟಾರೆಯಾಗಿ ಚುನಾವಣಾ ಪ್ರಕ್ರಿಯೆ ಶಾಂತಿಯುತ ಹಾಗೂ ಯಶಸ್ವಿಯಾಗಿ ನಡೆಸುವ ನಿಟ್ಟಿನಲ್ಲಿ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ವೆಂಕಟೇಶಕುಮಾರ್ ಸೂಚನೆ ನೀಡಿದರು.


ವಿವಿಧ ತಂಡಗಳ ರಚನೆ:

ನೀತಿಸಂಹಿತೆ ಜಾರಿಯಲ್ಲಿರುವುದರಿಂದ ಯಾವುದೇ ರೀತಿಯ ಹೊಸ ಕಾಮಗಾರಿಗಳನ್ನು ಆರಂಭಿಸುವಂತಿಲ್ಲ ಎಂದು ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ತಿಳಿಸಿದರು.

ಮಾದರಿ ನೀತಿ ಸಂಹಿತೆ ಪಾಲನೆ ಹಾಗೂ ನಿಗಾವಹಿಸಲು ಒಟ್ಟು 48 ವಿಡಿಯೋ ಸರ್ವೇಲನ್ಸ್ ತಂಡ ಹಾಗೂ 50 ಫ್ಲೈಯಿಂಗ್ ಸ್ಕ್ವಾಡ್ ಗಳನ್ನು ಈಗಾಗಲೇ ರಚಿಸಲಾಗಿದೆ. ಅಗತ್ಯ ತರಬೇತಿಯನ್ನು ನೀಡಲಾಗುವುದು.
ಇದಲ್ಲದೇ ಚುನಾವಣೆಗೆ ನಿಯೋಜಿತ ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿಗೆ ತರಬೇತಿಯನ್ನು ಶೀಘ್ರದಲ್ಲೇ ಆರಂಭಿಸಲಾಗುವುದು ಎಂದು ತಿಳಿಸಿದರು.


ಮಾದರಿ ನೀತಿ ಸಂಹಿತೆಗೆ ಸಂಬಂಧಿಸಿದಂತೆ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ದೂರು ನಿರ್ವಹಣೆಗೆ ಸೂಕ್ತ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ಚುನಾವಣಾ ಆಯೋಗದ ಅನುಮೋದನೆಯಂತೆ ಗ್ರಾಮ‌ ಪಂಚಾಯತಿ, ಮಹಾನಗರ ಪಾಲಿಕೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳು ಸೇರಿದಂತೆ ಒಟ್ಟು 511 ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗುವುದು. 


ಪೊಲೀಸ್ ಆಯುಕ್ತ ಡಾ.ಕೆ.ತ್ಯಾಗರಾಜನ್, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್ ಎಚ್.ವಿ., ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ್ ರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.


ಉಪ ವಿಭಾಗಾಧಿಕಾರಿಗಳಾದ ರವೀಂದ್ರ ಕರಲಿಂಗಣ್ಣವರ, ಶಶಿಧರ್ ಬಗಲಿ, ಬುಡಾ ಆಯುಕ್ತ ಪ್ರೀತಂ ನಸಲಾಪುರೆ, ಚುನಾವಣಾ ತರಬೇತುದಾರರಾದ ಎನ್.ವಿ.ಶಿರಗಾಂವಕರ, ಡಿಎಚ್ಓ ಡಾ.ಎಸ್.ವಿ.ಮುನ್ಯಾಳ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಬಾಲಕೃಷ್ಣ ತುಕ್ಕಾರ ಹಾಗೂ ಮಾದರಿ ನೀತಿಸಂಹಿತೆ ಸೇರಿದಂತೆ ವಿವಿಧ ತಂಡಗಳ ನೋಡಲ್ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.