ಕಿತ್ತೂರಿನಲ್ಲಿ ಚೆನ್ನಮ್ಮನ ಅರಮನೆಯ ಪ್ರತಿರೂಪ ಮರುಸೃಷ್ಟಿ; ಜಿಲ್ಲಾಧಿಕಾರಿ ಹಿರೇಮಠ  

ಕಿತ್ತೂರಿನಲ್ಲಿ ಚೆನ್ನಮ್ಮನ ಅರಮನೆಯ ಪ್ರತಿರೂಪ ಮರುಸೃಷ್ಟಿ; ಜಿಲ್ಲಾಧಿಕಾರಿ ಹಿರೇಮಠ   

 

 

ಬೆಳಗಾವಿ :  ಕಿತ್ತೂರಿನಲ್ಲಿ  ಜಿಲ್ಲಾಡಳಿತ ವತಿಯಿಂದ ಕಿತ್ತೂರು ಚೆನ್ನಮ್ಮ ಸಂಸ್ಥಾನದ ಅರಮನೆಯ ಪ್ರತಿರೂಪ ಮರು ಸ್ಥಾಪಿಸುವ ಕಾರ್ಯವನ್ನು ಮಾಡಲಾಗುತ್ತಿದ್ದು, ಕಿತ್ತೂರು ಸಂಸ್ಥಾನದ ರೀತಿಯಲ್ಲಿ ಕಟ್ಟಡ ನಿರ್ಮಾಣ ಮಾಡಿ ಸಾರ್ವಜನಿಕರು ವೀಕ್ಷಿಸಬಹುದಾದಂತಹ ಮ್ಯೂಸಿಯಂ ನಿರ್ಮಾಣ ಮಾಡಲಾಗುವುದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಹೇಳಿದರು. 

 

 

ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕಿತ್ತೂರು ರಾಣಿ ಚೆನ್ನಮ್ಮ ಉತ್ಸವ-2021 ಅಂಗವಾಗಿ ಶನಿವಾರ ಕಾಕತಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಚೆನ್ನಮ್ಮ ಮೂರ್ತಿಗೆ ಪೂಜೆ ನೆರವೇರಿಸಿ ಅವರು ಮಾತನಾಡಿದರು.

 

 

ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಆಗಮಿಸಿದ ಚಿಕ್ಕೋಡಿ ಲೋಕಸಭಾ ಸದಸ್ಯರಾದ ಅಣ್ಣಾಸಾಬ್ ಜೊಲ್ಲೆ ಅವರು ಮಾತನಾಡಿ, ಕಿತ್ತೂರು ರಾಣಿ ಚೆನ್ನಮ್ಮನ ತವರೂರು ಕಾಕತಿಯನ್ನು ಪ್ರವಾಸಿ ಸ್ಥಳವನ್ನಾಗಿ ಮಾಡಿದರೆ ಅದು ರಾಣಿ ಚೆನ್ನಮ್ಮನಿಗೆ ಸಲ್ಲಿಸುವ ಗೌರವವಾಗುತ್ತದೆ. ಕಿತ್ತೂರಿನಲ್ಲಿ ಅಭಿವೃದ್ಧಿ ಕೆಲಸ ಈಗಾಗಲೇ ಆರಂಭವಾಗಿದ್ದು, ಕಾಕತಿಯಲ್ಲಿಯೂ ಕೂಡ ಅತಿ ಶೀಘ್ರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುವುದು ಎಂದು ಜೊಲ್ಲೆ ತಿಳಿಸಿದರು.

 

 

ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕಾಗಿ ಸ್ವಾತಂತ್ರ್ಯ ತಂದುಕೊಟ್ಟ ರಾಣಿ ಚೆನ್ನಮ್ಮನ ಹುಟ್ಟೂರು ಎಂಬ ಫಲಕವನ್ನು ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಿಸುವಂತೆ   ಮಾಜಿ ಜಿಲ್ಲಾ ಪಂಚಾಯತ ಸದಸ್ಯರಾದ ಸಿದ್ದಗೌಡ ಸುಣಗಾರ ಮನವಿ ಮಾಡಿದರು.

 

 

ಕಾಕತಿ ಉತ್ಸವಕ್ಕೆ ಚಾಲನೆ:

 ರಾಣಿ ಚನ್ನಮ್ಮನ ತವರೂರು ಕಾಕತಿಯಲ್ಲಿ ಬೆಳಿಗ್ಗೆ 8:30 ಕ್ಕೆ  ಕಿತ್ತೂರು ರಾಣಿ ಚೆನ್ನಮ್ಮನ ಮೂರ್ತಿಗೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿ ಕಾಕತಿ ಉತ್ಸವಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತ್ ಸಿ.ಇ.ಓ ದರ್ಶನ್ ಹೆಚ್.ವಿ, ಪೋಲಿಸ್ ಆಯುಕ್ತರಾದ ಡಾ .ಕೆ.ತ್ಯಾಗರಾಜನ್, ಕಾಕತಿಯ ಉದಯ ಮಹಾಸ್ವಾಮಿಗಳು, ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆಯ ಮುಖ್ಯಸ್ಥರಾದ ಎಸ್.ಎಮ್ ಗಂಗಾಧರಯ್ಯ, ಕಾಕತಿಯ ವೀರ ರಾಣಿ ಕಿತ್ತೂರು ಚೆನ್ನಮ್ಮ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಎಸ್.ಡಿ.ಪಾಟೀಲ, ಕಾಕತಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಸುನೀಲ ಸುಣಗಾರ, ಮಾಜಿ ಸಚಿವರಾದ ಶಶಿಕಾಂತ ನಾಯಕ ಸೇರಿದಂತೆ ಕಾಕತಿ ಗ್ರಾಮ ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು. ಬೆಳಗಾವಿ ಉಪ ವಿಭಾಗಾಧಿಕಾರಿರವೀಂದ್ರ ಕರಲಿಂಗಣ್ಣವರ ಸ್ವಾಗತಿಸಿದರು, ರಮೇಶ.ವಿ. ಗೋಣಿ ನಿರೂಪಿಸಿದರು.