ಪಾಲಿಕೆ ಚುನಾವಣೆ; ಬಿಜೆಪಿಯಲ್ಲಿ ಟಿಕೆಟ್ ಗಾಗಿ ಭಾರೀ ಪೈಪೋಟಿ, ಇಂದು ಮೊದಲ ಪಟ್ಟಿ ಬಿಡುಗಡೆ ಸಾಧ್ಯತೆ

ಪಾಲಿಕೆ ಚುನಾವಣೆ; ಬಿಜೆಪಿಯಲ್ಲಿ ಟಿಕೆಟ್ ಗಾಗಿ ಭಾರೀ ಪೈಪೋಟಿ, ಇಂದು ಮೊದಲ ಪಟ್ಟಿ ಬಿಡುಗಡೆ ಸಾಧ್ಯತೆ

ಬೆಳಗಾವಿ: ಮಹಾನಗರ ಪಾಲಿಕೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ಮೂರು ದಿನಗಳ ಮಾತ್ರ ಉಳಿದಿರುವಾಗ, ಬಿಜೆಪಿಯಲ್ಲಿ ಆಭ್ಯರ್ಥಿಗಳ ಆಯ್ಕೆಗಾಗಿ ಮುಖಂಡರು ಸಾಕಷ್ಟು ಏದುಸಿರು ಬಿಡುವಂತಾಗಿದೆ. ಪ್ರತಿ ವಾರ್ಡ್ ನಿಂದ ಆಕಾಂಕ್ಷಿ ಅಭ್ಯರ್ಥಿಗಳ ಸಂದರ್ಶನ ನಡೆಯುತ್ತಿದ್ದು, ಅಂತಿಮ ಆಯ್ಕೆಯಾಗಿರುವ ಅಭ್ಯರ್ಥಿಗಳ ಮೊದಲ ಪಟ್ಟಿ ಇಂದು ಬಿಡುಗಡೆ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಮಹಾನಗರದಲ್ಲಿ ಒಟ್ಟು 58 ವಾರ್ಡ್ ಗಳಿದ್ದು, ಪ್ರತಿ ವಾರ್ಡ್ ನಲ್ಲಿಯೂ 25 ರಿಂದ 30 ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಲು ಆಸಕ್ತಿ ಹೊಂದಿದ್ದಾರೆ. ಪ್ರತಿ ಅಭ್ಯರ್ಥಿಯನ್ನು ಸಂದರ್ಶನಕ್ಕೆ ಒಳಪಡಿಸಲಾಗುತ್ತಿದೆ. ಅಭ್ಯರ್ಥಿಗಳಿಗೆ ಸಿದ್ಧ ಪ್ರಶ್ನಾವಳಿಯನ್ನು ಕೇಳಲಾಗುತ್ತಿದೆ. ವಿಶೇಷವಾಗಿ ನೀವು ಚುನಾವಣೆಗೆ ಸ್ಪರ್ಧಿಸುತ್ತಿರುವ ಉದ್ದೇಶವೇನು? ಗೆಲ್ಲುವ ಸಾಧ್ಯತೆಗಳೆಷ್ಟು? ಸಾಮಾಜಿಕ ಜಾಲತಾಣದಲ್ಲಿ ಎಷ್ಟು ಸಕ್ರೀಯರಾಗಿದ್ದೀರಿ? ಸಾಮಾಜಿಕ ಜಾಲತಾಣಗಳಲ್ಲಿ ಇರುವ ಫಾಲೋವರ್ ಗಳು ಎಷ್ಟು? ಮುಂತಾದ ಪ್ರಶ್ನೆಗಳನ್ನು ಕೇಳಲಾಗುತ್ತಿದೆ. ಮಹಾವೀರ ಭವನದಲ್ಲಿ ಶುಕ್ರವಾರ ಸಂದರ್ಶನ ನಡೆದಿದ್ದು, ಶನಿವಾರ ಮತ್ತು ಭಾನುವಾರವೂ ಇದು ಮುಂದುವರಿಯಲಿದೆ. 

ಬಿಜೆಪಿ ಕಾರ್ಯಕರ್ತರಲ್ಲದೆ, ಹಿಂದೆ ಎಂಇಎಸ್ ನಿಂದ ಸ್ಪರ್ಧಿಸಿದ್ದ ಕೆಲವು ಎಂಇಎಸ್ ಕಾರ್ಯಕರ್ತರೂ ಪಕ್ಷದಿಂದ ಸ್ಪರ್ಧಿಸಲು ಉತ್ಸುಕರಾಗಿದ್ದಾರೆ. ಅವರಿಗೆ ಟಿಕೆಟ್ ನೀಡುವ ಬಗ್ಗೆ ಪಕ್ಷದ ವರಿಷ್ಠರು ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಅನಿಲ ಬೆನಕೆ ತಿಳಿಸಿದ್ದಾರೆ. ಅಂತಿಮವಾಗಿ ಆಯ್ಕಾಯಾಗುವ 20 ರಿಂದ 25 ಅಭ್ಯರ್ಥಿಗಳ ಪಟ್ಟಿ ಇಂದು ಮಧ್ಯಾಹ್ನದ ವರೆಗೆ ಬಿಡುಗಡೆ ಆಗಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.