ಆಶ್ರಮ 3 ವಿವಾದ; ನಿರ್ದೇಶಕ ಪ್ರಕಾಶ ಝಾ ಮುಖಕ್ಕೆ ಮಸಿ ಬಳಿದ ಬಜರಂಗ ದಳದ ಕಾರ್ಯಕರ್ತರು; ಬಾಬಿ‌ ಡಿಯೋಲ್ ಗಾಗಿ‌ ಹುಡುಕಾಟ

ಆಶ್ರಮ 3 ವಿವಾದ; ನಿರ್ದೇಶಕ ಪ್ರಕಾಶ ಝಾ ಮುಖಕ್ಕೆ ಮಸಿ ಬಳಿದ ಬಜರಂಗ ದಳದ ಕಾರ್ಯಕರ್ತರು; ಬಾಬಿ‌ ಡಿಯೋಲ್ ಗಾಗಿ‌ ಹುಡುಕಾಟ

ಭೋಪಾಲ:  ಬಾಲಿವುಡ್​ ನಿರ್ದೇಶಕ ಪ್ರಕಾಶ್​ ಝಾ ಮಾಡುವ ಸಿನಿಮಾಗಳು ಒಂದಿಲ್ಲೊಂದು ರೀತಿಯಲ್ಲಿ ವಿವಾದ ಮಾಡಿಕೊಳ್ಳುತ್ತವೆ. ಈಗ ಅವರು ವೆಬ್​ ಸಿರೀಸ್​ ಲೋಕದಲ್ಲಿ ಸಕ್ರಿಯರಾಗಿದ್ದು, ಅಲ್ಲಿಯೂ ಕಿರಿಕ್​ ಆಗಿದೆ. ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಆಶ್ರಮ್​ 3’ ವೆಬ್​ ಸರಣಿಯ ಶೀರ್ಷಿಕೆ ಮತ್ತು ಕಥೆ ಬಗ್ಗೆ ಭಜರಂಗ ದಳದ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಶೂಟಿಂಗ್​ ಸ್ಥಳಕ್ಕೆ ನುಗ್ಗಿ ಹಲ್ಲೆ ಕೂಡ ಮಾಡಿದ್ದಾರೆ. ನಾಯಕ ಬಾಬಿ ಡಿಯೋಲ್​​ ಮೇಲೆ ಹಲ್ಲೆ ಮಾಡುವ ಉದ್ದೇಶದೊಂದಿಗೆ ಈ ದಾಳಿ ನಡೆದಿದೆ. ಆದರೆ ಅವರ ಕೈಗೆ ಬಾಬಿ ಡಿಯೋಲ್​ ಸಿಕ್ಕಿಲ್ಲ.


ಭೊಪಾಲ್​ನಲ್ಲಿ ‘ಆಶ್ರಮ್​ 3’ ಶೂಟಿಂಗ್ ನಡೆಯುತ್ತಿತ್ತು. ಹಳೇ ಜೈಲಿನಲ್ಲಿ ಕೆಲವು ಸೆಟ್​ಗಳನ್ನು ಹಾಕಲಾಗಿತ್ತು. ಚಿತ್ರೀಕರಣದ ಸ್ಥಳಕ್ಕೆ ಬಂದ ಭಜರಂಗ ದಳದ ಕಾರ್ಯಕರ್ತರು ವೆಬ್​ ಸಿರೀಸ್​ ತಂಡದ ಸಿಬ್ಬಂದಿಯನ್ನು ಮನಬಂದಂತೆ ಥಳಿಸಿದ್ದಾರೆ. ಶೂಟಿಂಗ್​ ಉಪಕರಣಗಳಿಗೆ ಹಾನಿ ಮಾಡಿದ್ದಾರೆ. ನಿರ್ದೇಶಕ ಪ್ರಕಾಶ್​ ಝಾ ಮುಖಕ್ಕೆ ಮಸಿ ಬಳಿಯಲಾಗಿದೆ. ‘ಬಾಬಿ ಡಿಯೋಲ್​ ಎಲ್ಲಿ’ ಎಂದು ಅವರೆಲ್ಲ ಕೂಗುತ್ತಿದ್ದರು ಎಂದು ವರದಿ ಆಗಿದೆ.
‘ಈ ವೆಬ್​ ಸರಣಿಗೆ ಆಶ್ರಮ್​ ಎಂದು ಹೆಸರಿಟ್ಟು, ಆಶ್ರಮದ ಗುರುಗಳು ಮಹಿಳೆಯರನ್ನು ಶೋಷಿಸುವ ದೃಶ್ಯಗಳನ್ನು ತೋರಿಸಲಾಗಿದೆ. ಚರ್ಚ್​ ಅಥವಾ ಮದರಾಸ ಬಗ್ಗೆ ಇದೇ ರೀತಿ ತೋರಿಸುವ ಧೈರ್ಯ ಇವರಲ್ಲಿ ಇದೆಯೇ? ‘ಆಶ್ರಮ್​ 1’ ಮತ್ತು ‘ಆಶ್ರಮ್​ 2’ ಬಳಿಕ ಈಗ ‘ಆಶ್ರಮ್​ 3’ ಮಾಡುತ್ತಿದ್ದಾರೆ. ಇದನ್ನು ಚಿತ್ರೀಕರಿಸಲು ನಾವು ಬಿಡಲ್ಲ. ಸದ್ಯಕ್ಕೆ ಪ್ರಕಾಶ್​ ಝಾ ಮುಖಕ್ಕೆ ಮಸಿ ಬಳಿದಿದ್ದೇವೆ. ಬಾಬಿ ಡಿಯೋಲ್​ಗಾಗಿ ಹುಡುಕುತ್ತಿದ್ದೇವೆ. ತಮ್ಮ ಸಹೋದರ ಸನ್ನಿ ಡಿಯೋಲ್​ ಅವರನ್ನು ನೋಡಿ ಬಾಬಿ ಡಿಯೋಲ್​ ಕಲಿಯಬೇಕು. ಅವರು ಎಂಥೆಂಥ ದೇಶಭಕ್ತಿ ಸಿನಿಮಾ ಮಾಡಿದ್ದಾರೆ’ ಎಂದು ಭಜರಂಗ ದಳದ ಮುಖಂಡ ಸುಶೀಲ್​ ಹೇಳಿದ್ದಾರೆ.
ನಿರ್ದೇಶಕ ಪ್ರಕಾಶ್​ ಝಾ ಅವರು ಘಟನೆಗೆ ಸಂಬಂಧಿಸಿದಂತೆ ಯಾವುದೇ ದೂರು ನೀಡಿಲ್ಲ. ಆದರೂ ಕೂಡ ಹಲ್ಲೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ. ವೆಬ್​ ಸರಣಿ ತಂಡದವರಿಗೆ ಪೂರ್ತಿ ಭದ್ರತೆ ನೀಡಿ, ಶೂಟಿಂಗ್​ಗೆ ತೊಂದರೆ ಆಗದಂತೆ ನೋಡಿಕೊಳ್ಳುವ ಭರವಸೆಯನ್ನು ಪೊಲೀಸರು ನೀಡಿದ್ದಾರೆ. ಭಜರಂಗ ದಳದವರು ಹಲ್ಲೆ ಮಾಡುತ್ತಿರುವ ವಿಡಿಯೋ ಕೂಡ ಲಭ್ಯವಾಗಿದ್ದು, ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ.