ಪಾಲಿಕೆ‌ ಚುನಾವಣೆ: ಅಭ್ಯರ್ಥಿಗಳು ‌5 ಮಂದಿಗಿಂತ ಹೆಚ್ಚು ಬೆಂಬಲಿಗರೊಂದಿಗೆ ಪ್ರಚಾರ ನಡೆಸುವಂತಿಲ್ಲ

ಪಾಲಿಕೆ‌ ಚುನಾವಣೆ: ಅಭ್ಯರ್ಥಿಗಳು ‌5 ಮಂದಿಗಿಂತ ಹೆಚ್ಚು ಬೆಂಬಲಿಗರೊಂದಿಗೆ ಪ್ರಚಾರ ನಡೆಸುವಂತಿಲ್ಲ

    

ಬೆಳಗಾವಿ: ಈಗಾಗಲೇ ಘೋಷಣೆಯಾಗಿರುವ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಗೆ ಅಭ್ಯರ್ಥಿಗಳು ನಡೆಸುವ ಪ್ರಚಾರಕ್ಕೆ ಸಂಬಂಧಪಟ್ಟಂತೆ ಹಲವು ನಿರ್ದೇಶನಗಳನ್ನು ನೀಡಿ ರಾಜ್ಯ ಚುನಾವಣಾ ಆಯೋಗ ಇಂದು ಆದೇಶ ಹೊರಡಿಸಿದೆ.

ವಿಶೇಷವಾಗಿ ಕೋವಿಡ್ ಹಿನ್ನೆಲೆಯಲ್ಲಿ
ಮನೆ- ಮನೆ ಪ್ರಚಾರ ಹಾಗೂ ಬಹಿರಂಗ ಪ್ರಚಾರಕ್ಕೆ ಸಂಬಂಧಿಸಿದಂತೆ ಅಭ್ಯರ್ಥಿಗಳು ಚುನಾವಣಾ ಆಯೋಗದ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗಿದೆ.

ಕೋವಿಡ್ ಹಿನ್ನೆಲೆಯಲ್ಲಿ ಅಭ್ಯರ್ಥಿಯು ತಾನೂ ಸೇರಿದಂತೆ ಗರಿಷ್ಠ 5 ಜನ ಬೆಂಬಲಿಗರೊಂದಿಗೆ ಫೇಸ್‍ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಮನೆ- ಮನೆಗೆ ಭೇಟಿ ನೀಡಿ ಪ್ರಚಾರ ನಡೆಸಬಹುದು. ಪ್ರಚಾರಕ್ಕೆ ವಾಹನ ಬಳಸುವುದನ್ನು ಮತ್ತು ಗುಂಪು ಸೇರಿ ಪ್ರಚಾರ ಮಾಡುವುದನ್ನು ನಿಷೇಧಿಸಲಾಗಿದೆ. ಮುದ್ರಣ ಹಾಗೂ ವಿದ್ಯುನ್ಮಾನ (ಎಲೆಕ್ಟ್ರಾನಿಕ್ ಮೀಡಿಯಾ) ಮಾಧ್ಯಮದಲ್ಲಿ ಪ್ರಚಾರ ಕೈಗೊಳ್ಳಬಹುದು ಮತ್ತು ಅವುಗಳ ವೆಚ್ಚದ ವಿವರವನ್ನು ಸಲ್ಲಿಸಬೇಕು. ಪ್ರಚಾರಕ್ಕಾಗಿ ನಿಯಮಾನುಸಾರ ಮುದ್ರಿಸಿದ ಕರಪತ್ರವನ್ನು ಹಂಚಬಹುದು. ಈ ಸಮಯದಲ್ಲಿ ಕಡ್ಡಾಯವಾಗಿ ಫೇಸ್‍ಮಾಸ್ಕ್ ಧರಿಸಿರಬೇಕು ಎಂದು ರಾಜ್ಯ ಚುನಾವಣಾ ಆಯೋಗ ಆದೇಶ ಹೊರಡಿಸಿದೆ.

ಆಯೋಗದ ನಿರ್ದೇಶನಗಳ ಉಲ್ಲಂಘನೆಯಾದಲ್ಲಿ ಅಭ್ಯರ್ಥಿಗಳ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದು. ಭಾರತ ಸಂವಿಧಾನದ ಪರಿಚ್ಛೇದ 243 ಝಡ್‌ಎ ರನ್ವಯ ರಾಜ್ಯ ‌ಚುನಾವಣಾ ಆಯೋಗವು ಮೇಲಿನ  ನಿರ್ದೇಶನಗಳನ್ನು ನೀಡಿ ಆದೇಶಿಸಿದೆ.