ಬೆಳಗಾವಿಯ ಪಾಂಗುಳ ಗಲ್ಲಿ ಅಶ್ವತ್ಥಾಮ ದೇವಸ್ಥಾನಕ್ಕೆ ಮತ್ತೆ ಕಾಡುತ್ತಿದೆ ತೆರವಿನ‌ ಭೀತಿ ; ಮತ್ತೊಂದು ಹೋರಾಟಕ್ಕೆ ‌ಸಿದ್ಧವಾಗುತ್ತಿರುವ ಸ್ಥಳಿಯರು

ಬೆಳಗಾವಿಯ ಪಾಂಗುಳ ಗಲ್ಲಿ ಅಶ್ವತ್ಥಾಮ ದೇವಸ್ಥಾನಕ್ಕೆ ಮತ್ತೆ ಕಾಡುತ್ತಿದೆ ತೆರವಿನ‌ ಭೀತಿ ; ಮತ್ತೊಂದು ಹೋರಾಟಕ್ಕೆ ‌ಸಿದ್ಧವಾಗುತ್ತಿರುವ ಸ್ಥಳಿಯರು

ಬೆಳಗಾವಿ: ಕರ್ನಾಟಕ ಹೈಕೋರ್ಟ್ ರಾಜ್ಯದಲ್ಲಿನ ಅನಧಿಕೃತ ಧಾರ್ಮಿಕ ಕಟ್ಟಡಗಳ ಮಾಹಿತಿ ಕೇಳಿರುವುದರಿಂದ, ಅಧಿಕಾರಿಗಳು ಅಂತಹ ಕಟ್ಟಡಗಳ‌ ತೆರವಿಗೆ ಮುಂದಾಗಿದ್ದು, ಹೀಗಾಗಿ ಬೆಳಗಾವಿಯಲ್ಲಿನ ಪಾಂಗುಳ ಗಲ್ಲಿಯಲ್ಲಿನ 150 ವರ್ಷ ಇತಿಹಾಸವಿರುವ ಅಶ್ವತ್ಥಾಮ ಮಂದಿರಕ್ಕೆ ಮತ್ತೆ ತೆರವಿನ ಭೀತಿ ಕಾಡುತ್ತಿದೆ.


ಸಾರ್ವಜನಿಕ ಸ್ಥಳಗಳಲ್ಲಿ ನಿರ್ಮಾಣವಾಗಿರುವ ಹಾಗೂ ಅನಧಿಕೃತ ದೇವಸ್ಥಾನಗಳು, ಮಸೀದಿ, ದರ್ಗಾ, ಚರ್ಚುಗಳನ್ನು ತೆರವುಗೊಳಿಸುವಂತೆ 2009 ರಲ್ಲಿ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಆದೇಶದಂತೆ ಅಂದಿನಿಂದ ಅಂತಹ ಧಾರ್ಮಿಕ ಕಟ್ಟಡಗಳ ತೆರವು ಪ್ರಕ್ರಿಯೆ ಮುಂದುವರಿದಿದೆ. ಕೆಲವು ಕಟ್ಟಡಗಳನ್ನು ಈಗಾಗಲೇ ತೆರವುಗೊಳಿಸಲಾಗಿದ್ದು, ಇನ್ನೂ ಕೆಲವು ಹಾಗೇ ಉಳಿದುಕೊಂಡಿವೆ. ಹೈಕೋರ್ಟ್ ಈಗ ಅನಧಿಕೃತ ಧಾರ್ಮಿಕ ಕಟ್ಟಡಗಳ‌ ತೆರವುಗೊಳಿಸುವ ಪ್ರಕ್ರಿಯೆಯ ಪ್ರಗತಿಯನ್ನು ರಾಜ್ಯ ಸರ್ಕಾರಕ್ಕೆ ಕೇಳಿರುವುದರಿಂದ ಅಧಿಕಾರಿಗಳು ಈಗ ಮತ್ತೊಮ್ಮೆ ಕಾರ್ಯಪ್ರವೃತ್ತರಾಗಿದ್ದಾರೆ.


2009 ರಲ್ಲಿ ಆದೇಶ ಬಂದಾಗ, ಪಾಂಗುಳ ಗಲ್ಲಿಯಲ್ಲಿನ ಸ್ಥಳೀಯರು ದೊಡ್ಡ ಮಟ್ಟದ ಹೋರಾಟ ನಡೆಸಿ ರಸ್ತೆ ಮಧ್ಯದಲ್ಲಿಯೇ ಇರುವ ದೇವಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ದೇಶದಲ್ಲಿ ಕೆಲವೇ ಕೆಲವು ಇರುವ ಅಶ್ವತ್ಥಾಮ ಮಂದಿರಗಳಲ್ಲಿ ಬೆಳಗಾವಿಯ ಮಂದಿರ ಕೂಡ ಒಂದಾಗಿದ್ದು, ಈ ದೇವಸ್ಥಾನಕ್ಕೆ 150 ವರ್ಷಗಳ ಇತಿಹಾಸ ಇದೆ. ರಂಗಪಂಚಮಿ‌ ದಿನ ನೂರಾರು ಸಂಖ್ಯೆಯಲ್ಲಿ ಯುವಕರು ಇಲ್ಲಿ ಉರುಳು ಸೇವೆ ಮಾಡುತ್ತಾರೆ. ಈ ದೇವಸ್ಥಾನಕ್ಕೆ ಈಗ ಮತ್ತೆ ತೆರವಿನ ಭೀತಿ ಎದುರಾಗಿದೆ.

ಅಶ್ವತ್ಥಾಮ ಮಂದಿರ ಅಷ್ಟೇ ‌ಅಲ್ಲ, ಬೆಳಗಾವಿ ನಗರದಲ್ಲಿ ಒಟ್ಟು 29 ಕ್ಕೂ ಹೆಚ್ಚು ‌ಧಾರ್ಮಿಕ ಕಟ್ಟಡಗಳಿದ್ದು, ಸ್ಥಳೀಯರ ಮನವೊಲಿಸಿ ಅವುಗಳನ್ನು ತೆರವುಗೊಳಿಸುವ ಜವಾಬ್ದಾರಿ ‌ಜಿಲ್ಲಾಡಳಿತದ ಮೇಲಿದೆ. ವಿಶೇಷವಾಗಿ ದೇವಸ್ಥಾನಗಳ ತೆರವಿಗೆ ಹಿಂದೂಪರ ಸಂಘಟನೆಗಳಿಂದ ದೊಡ್ಡ ಮಟ್ಟದಲ್ಲಿ ವಿರೋಧ ವ್ಯಕ್ತವಾಗುತ್ತಿದೆ.


ವಿಶ್ವ ‌ಹಿಂದೂ ಪರಿಷತ್ತಿನ ಕೃಷ್ಣ ಭಟ್ ಅವರ ಪ್ರಕಾರ, ಅಧಿಕಾರಿಗಳು ದೇವಸ್ಥಾನಗಳ ತೆರವಿಗೆ ತೋರಿಸಿದಷ್ಟು ಆಸಕ್ತಿಯನ್ನು ಅನಧಿಕೃತ ಮಸೀದಿ ಅಥವಾ ಚರ್ಚ್ ಗಳ ತೆರವಿಗೆ ತೋರಿಸುತ್ತಿಲ್ಲ. ಅಧಿಕಾರಿಗಳು ಇಬ್ಬಗೆಯ ನೀತಿ ಅನುಸರಿಸುತ್ತಿದ್ದಾರೆ. ಕೇಂದ್ರ ಬಸ್ ನಿಲ್ದಾಣದ ಹೊರಗೆ ರಸ್ತೆ ‌ಮಧ್ಯದಲ್ಲಿಯೇ ದರ್ಗಾ ಇದ್ದು, ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದರೂ ಅಧಿಕಾರಿಗಳು ಅದರತ್ತ ಗಮನ ಹರಿಸಿಲ್ಲ ಎಂದು ಆರೋಪಿಸಿದರು.