ಅಥಣಿಯಲ್ಲಿ ಎರಡು ವರ್ಷದ ಬಾಲಕಿಯನ್ನು ಅಪಹರಿಸಿ ಕ್ರೂರವಾಗಿ ಸಿಗರೇಟಿನಿಂದ‌ ಸುಟ್ಟು ಕಬ್ಬಿನ‌ ಗದ್ದೆಯಲ್ಲಿ ಎಸೆದು‌ ಹೋದ ಕಿರಾತಕರು 

ಅಥಣಿಯಲ್ಲಿ ಎರಡು ವರ್ಷದ ಬಾಲಕಿಯನ್ನು ಅಪಹರಿಸಿ ಕ್ರೂರವಾಗಿ ಸಿಗರೇಟಿನಿಂದ‌ ಸುಟ್ಟು ಕಬ್ಬಿನ‌ ಗದ್ದೆಯಲ್ಲಿ ಎಸೆದು‌ ಹೋದ ಕಿರಾತಕರು 

ಬೆಳಗಾವಿ: ಎರಡು ವರ್ಷದ ಮುಗ್ಧ ಬಾಲಕಿಯನ್ನು ಅಪಹರಿಸಿ ಸಿಗರೇಟಿನಿಂದ ಸುಟ್ಟು ಕಿರಾತಕರು, ಬಾಲಕಿ ಪ್ರಜ್ಞಾಹೀನವಾದ ಬಳಿಕ‌ ಆಕೆಯನ್ನು ಕಬ್ಬಿನ ಗದ್ದೆಯಲ್ಲಿ ‌ಎಸೆದು ಹೋಗಿರುವ ಘಟನೆ ಅಥಣಿ ತಾಲೂಕಿನ ಹಲ್ಯಾಳ ಗ್ರಾಮದಲ್ಲಿ ನಡೆದಿದೆ.

ಬಾಲಕಿಯ ಅರ್ತನಾದ ಕೇಳಿದ ಕೆಲವರು ಮಾಹಿತಿ ತಿಳಿಸಿದ ಕೂಡಲೇ ಲಕ್ಷ್ಮಣ ಸವದಿ ಅಭಿಮಾನಿ ಬಳಗದ ಪ್ರದೀಪ ನಂದಗಾಂವ ಎಂಬವರು ಕೂಡಲೇ ಸ್ಥಳಕ್ಕೆ ತೆರಳಿ ಬಾಲಕಿಯನ್ನು ಅಥಣಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುವ ವ್ಯವಸ್ಥೆ ಮಾಡಿದ್ದಾರೆ. 

ದುಷ್ಟ ಆರೋಪಿಗಳು ಬಾಲಕಿಯ ಮೈತುಂಬ ಎಲ್ಲಾ ಕಡೆ ಸಿಗರೇಟಿನಿಂದ ಸುಟ್ಟಿದ್ದಾರೆ. ಗುಪ್ತ ಜಾಗವನ್ನೂ ಬಿಡದೆ ಸುಟ್ಟು ವಿಕೃತಿ ಮೆರೆದಿದ್ದಾರೆ. ಮುಗ್ಧ ಬಾಲಕಿಯ ಮೇಲಿನ‌ ಸುಟ್ಟ ಗಾಯಗಳು ಮತ್ತು ಆಕೆಯ ಅವಸ್ಥೆ ನೋಡಿದವರಿಗೆ ಜೀವ ಬಾಯಿಗೆ ಬರುತ್ತದೆ. ಬಾಲಕಿ ಎಷ್ಟೊಂದು ನೋವು ಅನುಭವಿಸಿರಬಹುದು ಎನ್ನುವುದು ಕಲ್ಪನೆ ಮಾತ್ರ ಮಾಡಿಕೊಳ್ಳಲು ಸಾಧ್ಯ. ನೀಚರು ಅಷ್ಟರ ಮಟ್ಟಿಗೆ ದುಷ್ಟತನ ಪ್ರದರ್ಶಿಸಿದ್ದಾರೆ. 

ಆರೋಪಿಗಳು ಯಾರು ಮತ್ತು ಯಾವ ಕಾರಣಕ್ಕಾಗಿ ಹೀಗೆ ಮಾಡಿದ್ದಾರೆ ಎನ್ನುವುದು ತನಿಖೆಯಿಂದಷ್ಟೇ ಗೊತ್ತಾಗಬೇಕಿದೆ. ಬಾಲಕಿಯ ಗುರುತು ಪರಿಚಯ ಇನ್ನೂ ಸಿಕ್ಕಿಲ್ಲ. ಬಾಲಕಿಗೆ ಪ್ರಜ್ಞೆ ಬಂದಿದ್ದರೂ ನರಳಾಟ ನಿಂತಿಲ್ಲ.

ಮಾಹಿತಿ ತಿಳಿದ ತಕ್ಷಣ ಸ್ಥಳೀಯ ಪೊಲೀಸರು ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಆಸ್ಪತ್ರೆಗೆ ಧಾವಿಸಿದ್ದು ಮಾಹಿತಿ ಕಲೆಹಾಕುತ್ತಿದ್ದಾರೆ.