ಶಶಿಕಲಾ ನಟರಾಜನ್ ಗೆ ರಾಜಾತಿಥ್ಯ; ಹಿಂಡಲಗಾ ಜೈಲಿನ ಸೂಪರಿಂಟೆಂಡೆಂಟ್ ‌ಮನೆ ಮೇಲೆ ಎಸಿಬಿ ದಾಳಿ

ಶಶಿಕಲಾ ನಟರಾಜನ್ ಗೆ ರಾಜಾತಿಥ್ಯ; ಹಿಂಡಲಗಾ ಜೈಲಿನ ಸೂಪರಿಂಟೆಂಡೆಂಟ್ ‌ಮನೆ ಮೇಲೆ ಎಸಿಬಿ ದಾಳಿ

ಬೆಳಗಾವಿ:  ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿ.ಜಯಲಲಿತಾ ಅವರ ಆಪ್ತೆ ಶಶಿಕಲಾ ನಟರಾಜನ್ ಅವರು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾಗ, ಅವರಿಗೆ ರಾಜಾತಿಥ್ಯ ನೀಡಿದ ಆರೋಪದ ಹಿನ್ನೆಲೆಯಲ್ಲಿ ಹಿಂಡಲಗಾ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಕೃಷ್ಣಕುಮಾರ್ ನಿವಾಸದ ಮೇಲೆ ಎಸಿಬಿ ಅಧಿಕಾರಿಗಳು ಇಂದು ದಾಳಿ ನಡೆಸಿ ಮಾಹಿತಿ ಕಲೆ ಹಾಕಿದ್ದಾರೆ.

ಬೆಳಗಾವಿ ಹೊರವಲಯದ ಹಿಂಡಲಗಾ ಜೈಲಿನ ಪಕ್ಕದ ಸರ್ಕಾರಿ ಕ್ವಾರ್ಟರ್ಸ್ ನಲ್ಲಿ ವಾಸವಿರುವ ಕೃಷ್ಣಕುಮಾರ ನಿವಾಸದ ಮೇಲೆ ಬೆಂಗಳೂರಿನ ಐವರು ಎಸಿಬಿ ಅಧಿಕಾರಿಗಳ ತಂಡ ಇಂದು ಬೆಳಗ್ಗೆ ದಾಳಿ ಮಾಡಿ ಪರಿಶೀಲನೆ ನಡೆಸಿತು. ಈ ವೇಳೆ ಅವರಿಗೆ ಸ್ಥಳೀಯ ಎಸಿಬಿ ಅಧಿಕಾರಿಗಳು ಸಾಥ್ ನೀಡಿದರು.

ಕೃಷ್ಣಕುಮಾರ್ ಅವರು ಈ ಹಿಂದೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನ ಅಧೀಕ್ಷಕರಾಗಿದ್ದರು. ಆಗ ಅವರು ಶಶಿಕಲಾ ನಟರಾಜನ್ ಅವರಿಗೆ ರಾಜಾತಿಥ್ಯ ನೀಡಿದ್ದರು ಎಂದು ಐಪಿಎಸ್ ಅಧಿಕಾರಿ ಡಿ.ರೂಪಾ 2018ರಲ್ಲಿ ದೂರು ದಾಖಲಿಸಿದ್ದರು. ಇಂದಿನ ದಾಳಿಯು ಆ ದೂರಿನ‌ ತನಿಖೆಯ ಭಾಗವಾಗಿದೆ.

ಎಸಿಬಿ ಮೂಲಗಳ ಪ್ರಕಾರ ದಾಳಿಯಲ್ಲಿ ತನಿಖೆಗೆ ಸಹಾಯವಾಗುವಂತಹ ಯಾವುದೇ ರೀತಿಯ ಮಾಹಿತಿ ದೊರೆತಿಲ್ಲ. ಅಕ್ರಮವಾಗಿ ಹಣ ಸಂಪಾದನೆ ಮಾಡಿರುವ ಬಗ್ಗೆ ಯಾವುದೇ‌ ದಾಖಲೆಗಳು ಲಭ್ಯವಾಗಿಲ್ಲ.