ಬೆಳಗಾವಿಯಲ್ಲೊಂದು‌ ವಿಶಿಷ್ಠ ಪೊಲೀಸ್ ಮ್ಯೂಜಿಯಂ; ಇಲ್ಲಿ‌ ಏನೇನಿದೆ‌ ಗೊತ್ತೆ?

ಬೆಳಗಾವಿಯಲ್ಲೊಂದು‌ ವಿಶಿಷ್ಠ ಪೊಲೀಸ್ ಮ್ಯೂಜಿಯಂ; ಇಲ್ಲಿ‌ ಏನೇನಿದೆ‌ ಗೊತ್ತೆ?

ಬೆಳಗಾವಿ: ದೇಶದಲ್ಲೇ ಕರ್ನಾಟಕ ಪೊಲೀಸ್ ಇಲಾಖೆಗೆ ತನ್ನದೇ ಆದ ಇತಿಹಾಸವಿದೆ. ಹಲವು ಚಾಲೆಂಜಿಂಗ್ ಪ್ರಕರಣಗಳನ್ನು ಬೇಧಿಸಿರುವ ಕರ್ನಾಟಕ ಪೊಲೀಸರು ಕಾಲಕಾಲಕ್ಕೆ ತನಿಖೆಯಲ್ಲಿ ಅಮೂಲಾಗ್ರ ಬದಲಾವಣೆ ತಂದಿದ್ದಾರೆ. ಐವತ್ತು ವರ್ಷಗಳ ಹಿಂದೆ ಇದ್ದ ಪೊಲೀಸ್ ಇಲಾಖೆಗೂ ಈಗಿನ‌ ಪೊಲೀಸ್ ಇಲಾಖೆಗೂ ಅಜಗಜಾಂತರ ವ್ಯತ್ಯಾಸವಿದೆ.

ಹಿಂದೆ ಪೊಲೀಸರು ಗಲಭೆ ನಿಯಂತ್ರಣಕ್ಕೆ, ಅಪರಾಧ ಬೇಧಿಸಲು ಬಳಸುತ್ತಿದ್ದ ಉಪಕರಣಗಳು, ಆಗಿನ ಪೊಲೀಸ್ ಸಮವಸ್ತ್ರ, ಪೊಲೀಸ್ ಬ್ಯಾಂಡ್ ಹೇಗಿತ್ತು ಎಂಬ ಕುತೂಹಲ ಎಲ್ಲರಿಗೂ ಇದೆ. ರಾಜ್ಯ ಪೊಲೀಸ್ ಇಲಾಖೆ‌ ನಡೆದು ಬಂದ ಹಾದಿ ಬಗ್ಗೆ ಮಾಹಿತಿ ನೀಡುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಮ್ಯೂಸಿಯಂ ಒಂದನ್ನು ನಿರ್ಮಾಣ ಮಾಡಿದ್ದಾರೆ.

ಅಪರಾಧ ಪತ್ತೆ, ಗಲಭೆ ನಿಯಂತ್ರಣಕ್ಕೆ ಈ ಹಿಂದೆ ಕರ್ನಾಟಕ ಪೊಲೀಸ್ ಇಲಾಖೆ ಬಳಸುತ್ತಿದ್ದ ಉಪಕರಣಗಳು. ರಕ್ಷಣಾ ಪರಿಕರಗಳು. ಗ್ರೆನೇಡ್‌ಗಳು. ಹಳೆಯ ಕೈ ಕೋಳ. ಪೊಲೀಸ್ ಹ್ಯಾಟ್. ಹಳೆಯ ಲಾಠಿ, ಜಾಕೆಟ್. ಪೊಲೀಸ್ ಬ್ಯಾಂಡ್‌ನಲ್ಲಿ ಈ ಹಿಂದೆ ಬಳಸುತ್ತಿದ್ದ ಬೃಹದಾಕಾರದ ವಾದ್ಯ ವೃಂದಗಳು. ಮೆಟಲ್ ಡಿಟೆಕ್ಟರ್. ಈ ಹಿಂದೆ‌ ಪೊಲೀಸರು ಬಳಸುತ್ತಿದ್ದ ಎಫ್‌ಎಸ್‌ಎಲ್ ಹಾಗೂ ಇನ್ವೆಸ್ಟಿಗೇಷನ್ ಕಿಟ್. 1972ರಲ್ಲಿ ಬಳಸುತ್ತಿದ್ದ ಮೂವಿಂಗ್ ರಿಪೇರ್ ವೆಹಿಕಲ್. ಈ ಎಲ್ಲಾ ವಸ್ತುಗಳು ಇರೋದು ಬೆಳಗಾವಿಯ ಪೊಲೀಸ್ ಹೆಡ್ ಕ್ವಾರ್ಟರ್ಸ್‌ನಲ್ಲಿ ನಿರ್ಮಿಸಿರುವ ಪೊಲೀಸ್ ಮ್ಯೂಸಿಯಂನಲ್ಲಿ. ಇದು ಕುಂದಾನಗರಿ ಬೆಳಗಾವಿಯಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಪೊಲೀಸ್ ಮ್ಯೂಸಿಯಂ ಸ್ಥಾಪಿಸಲಾಗಿದೆ. ನೂತನವಾಗಿ ನಿರ್ಮಿಸಿರುವ ಪೊಲೀಸ್ ಮ್ಯೂಸಿಯಂನ್ನು ಡಿಜಿಪಿ ಪ್ರವೀಣ್ ಸೂದ್ ಉದ್ಘಾಟಿಸಿದರು‌.

ಬೆಳಗಾವಿಯ ಪೊಲೀಸ್ ಹೆಡ್‌ಕ್ವಾರ್ಟರ್ಸ್‌ನಲ್ಲಿ ನಿರ್ಮಿಸಿರುವ ಪೊಲೀಸ್ ವಸ್ತು ಸಂಗ್ರಹಾಲಯದಲ್ಲಿ ಪೊಲೀಸ್ ಇಲಾಖೆ ಈ ಮೊದಲು ಪೊಲೀಸ್ ಇಲಾಖೆಯಲ್ಲಿ ಬಳಸುತ್ತಿದ್ದ ಉಪಕರಣ, ಸಮವಸ್ತ್ರ, ನಿಷ್ಕ್ರಿಯವಾದ ಗ್ರೆನೇಡ್‌ಗಳು, ಎಫ್‌ಎಸ್‌ಎಲ್ ಗಾಗೂ ಇನ್ವೆಸ್ಟಿಗೇಷನ್ ಕಿಟ್‌ಗಳು, ಪೊಲೀಸ್ ಬ್ಯಾಂಡ್‌ನಲ್ಲಿ ಬಳಸುತ್ತಿದ್ದಂತಹ ವಾದ್ಯವೃಂದದ ಹಳೆಯ ಉಪಕರಣಗಳು. ಈ ಹಿಂದೆ ಪೊಲೀಸರು ಧರಿಸುತ್ತಿದ್ದ ಸಮವಸ್ತ್ರ , ಗಲಭೆ ನಿಯಂತ್ರಿಸಲು ಬಳಸುತ್ತಿದ್ದ ಹಳೆಯ ಹೆಲ್ಮೆಟ್, ಲಾಠಿ, ರಕ್ಷಣಾ ಕವಚ, ಮೆಟಲ್ ಡಿಟೆಕ್ಟರ್, ಈ ಹಿಂದೆ ಬಾಂಬ್ ನಿಷ್ಕ್ರಿಯ ದಳ ಬಳಸುತ್ತಿದ್ದ ಉಪಕರಣಗಳು ಸೇರಿದಂತೆ ಹಲವು ವಸ್ತುಗಳನ್ನು ಸಂಗ್ರಹಿಸಿಡಲಾಗಿದೆ.

ಪೊಲೀಸ್ ವಸ್ತು ಸಂಗ್ರಹಾಲಯ ಸ್ಥಾಪಿಸಬೇಕೆಂಬ ಪರಿಕಲ್ಪನೆಯೊಂದಿಗೆ ಬೆಳಗಾವಿ ಎಸ್‌ಪಿ ಲಕ್ಷ್ಮಣ್ ನಿಂಬರಗಿ ಬೆಳಗಾವಿಯಲ್ಲಿರುವ ಮರಾಠಾ ಲೈಟ್ ಇನ್ಫೆಂಟ್ರಿ ಅಧಿಕಾರಿಗಳನ್ನು ಸಂಪರ್ಕಿಸಿ ಅವರ ಸಲಹೆ ಪಡೆದು‌ ಪೊಲೀಸ್ ವಸ್ತು ಸಂಗ್ರಹಾಲಯ ಸ್ಥಾಪಿಸಿದ್ದಾರೆ. ಇನ್ನು ಈ ಕುರಿತು ಮಾತನಾಡಿದ ಬೆಳಗಾವಿ ಎಸ್‌ಪಿ ಲಕ್ಷ್ಮಣ್ ನಿಂಬರಗಿ, 'ಬೆಳಗಾವಿ ಹಳೆಯ ಜಿಲ್ಲೆ. ಬ್ರಿಟಿಷರ ಕಾಲದಲ್ಲಿಯೂ ಬೆಳಗಾವಿ ಜಿಲ್ಲಾ ಕೇಂದ್ರವಾಗಿತ್ತು‌. ಇಲ್ಲಿರುವ ಪೊಲೀಸ್ ಇಲಾಖೆಗೆ 120 ವರ್ಷಗಳ ಇತಿಹಾಸವಿದೆ. ಈ ಹಿಂದಿನ ಇತಿಹಾಸ ಹಾಗೂ ವಾಸ್ತವ, 120 ವರ್ಷಗಳ ಇತಿಹಾಸದಲ್ಲಿ ಆದ ಬದಲಾವಣೆ ಬಗ್ಗೆ ಜನರಿಗೆ ತಿಳಿಹೇಳುವ ಸಣ್ಣ ಪ್ರಯತ್ನವೇ‌ ಪೊಲೀಸ್ ವಸ್ತು ಸಂಗ್ರಹಾಲಯ. ಈ ಪೊಲೀಸ್ ಮ್ಯೂಸಿಯಂನಿಂದ ಮುಂಬರುವ ಪೊಲೀಸ್ ಪ್ರಶಿಕ್ಷಣಾರ್ಥಿಗಳಿಗೂ ಅನುಕೂಲವಾಗುತ್ತೆ ಎಂದರು.

ಇನ್ನು ಈ ವಸ್ತು ಸಂಗ್ರಹಾಲಯ ಎದುರು 1972ರಲ್ಲಿ ಬಳಸುತ್ತಿದ್ದ ಮೂವಿಂಗ್ ರಿಪೇರ್ ಬಸ್ ಸಹ ಇಡಲಾಗಿದೆ. ಯಾವುದಾದರೂ ಪೊಲೀಸ್ ವಾಹನ ರಿಪೇರಿ ಇದ್ರೆ ಆ ಸ್ಥಳಕ್ಕೆ ಹೋಗಿ ವಾಹನ ರಿಪೇರಿ ಮಾಡುವ ಕೆಲಸಕ್ಕೆ ಈ ವಾಹನ ಬಳಸಲಾಗುತ್ತಿತ್ತಂತೆ. ಇನ್ನು ಪೊಲೀಸ್ ಮ್ಯೂಸಿಯಂ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಬಗ್ಗೆ ಮುಂದಿ‌ನ ದಿನಗಳಲ್ಲಿ ತೀರ್ಮಾನಿಸಲಾಗುವುದು. ಶಾಲೆಗಳು ಆರಂಭವಾದ ಬಳಿಕ ತಿಂಗಳಲ್ಲಿ ಒಂದೆರಡು ದಿನ ಒಂದೊಂದು ಶಾಲೆಯ ವಿದ್ಯಾರ್ಥಿಗಳಿಗೆ ವೀಕ್ಷಣೆಗೆ ವ್ಯವಸ್ಥೆ ಮಾಡುವ ಚಿಂತನೆ ಇದೆ.‌ ಮುಂಬರುವ ದಿನಗಳಲ್ಲಿ ನಮಗೆ ಲಭ್ಯವಾಗುವ ಹಳೆಯ ಉಪಕರಣಗಳನ್ನು ಸುವ್ಯವಸ್ಥಿತವಾಗಿ ಇಡುವಂತಹ ವ್ಯವಸ್ಥೆ ಮಾಡ್ತೀವಿ ಅಂತಾ ಬೆಳಗಾವಿ ಎಸ್‌ಪಿ ಲಕ್ಷ್ಮಣ್ ನಿಂಬರಗಿ ತಿಳಿಸಿದ್ದಾರೆ.
 
ಸೌಜನ್ಯ: News18ಕನ್ನಡ