ಕಳೆದ‌ 3-4 ದಿನಗಳಿಂದ‌ ಹುಬ್ಬಳ್ಳಿ ಜನರ ನಿದ್ದೆಗೆಡಿಸಿರುವ ಚಿರತೆ; ಕೇಂದ್ರೀಯ ವಿದ್ಯಾಲಯ ಮೈದಾನದಲ್ಲಿಯೂ ಪ್ರತ್ಯಕ್ಷ

ಕಳೆದ‌ 3-4 ದಿನಗಳಿಂದ‌ ಹುಬ್ಬಳ್ಳಿ ಜನರ ನಿದ್ದೆಗೆಡಿಸಿರುವ ಚಿರತೆ; ಕೇಂದ್ರೀಯ ವಿದ್ಯಾಲಯ ಮೈದಾನದಲ್ಲಿಯೂ ಪ್ರತ್ಯಕ್ಷ

 

ಹುಬ್ಬಳ್ಳಿ: ನಗರದಲ್ಲಿ ಕೆಲದಿನಗಳಿಂದ‌‌ ಚಿರತೆಯೊಂದು ಆತಂಕ ಸೃಷ್ಟಿಸಿದೆ. ಇಷ್ಟು ದಿನ ನೆಮ್ಮದಿಯಿಂದ ಇದ್ದ ಜನರನ್ನು ಆತಂಕದಿಂದಲೇ ಓಡಾಡುವಂತೆ ಮಾಡಿದೆ. ಕೆಲವು ದಿನಗಳಿಂದ ಚಿರತೆ ಇಲ್ಲೇ ಓಡಾಡುತ್ತಿದೆ ಎನ್ನುವ ಊಹಾಪೋಹಕ್ಕೆ ಇದೀಗ ಪುಷ್ಟಿ ಸಿಕ್ಕಿದ್ದು ಜನರು ಜೀವವನ್ನೇ ಕೈಯಲ್ಲಿ ಹಿಡಿದುಕೊಂಡೆ ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ಅರಣ್ಯ ಇಲಾಖೆಯವರು ಅಲ್ಲಲ್ಲಿ ಚಿರತೆ ಇದೆ ಎನ್ನುವ ಎಚ್ಚರಿಕೆ ಫಲಕಗಳನ್ನು ಹಾಕಿದ್ದಾರೆ. ಕಳೆದ 4-5 ದಿನಗಳಿಂದ ಇಲ್ಲಿ ಚಿರತೆ ಇದೆ. ರಾತ್ರಿಯೆಲ್ಲ ಓಡಾಡುತ್ತದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಅದರಂತೆ ಕೆಲ ದಿನಗಳ ಅರಣ್ಯ ಸಿಬ್ಬಂದಿ ನೃಪತುಂಗ ಬೆಟ್ಟದ ಸುತ್ತಮುತ್ತ ಚಿರತೆಗಾಗಿ ಬಲೆ ಬೀಸಿದ್ದರು. ಆದರೆ ಚಿರತೆ ಮಾತ್ರ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಆದರೆ ಮೊನ್ನೆ ರಾತ್ರಿ ದಿಢೀರ್ ಅಂತ ಮತ್ತೆ ಚಿರತೆ ಪ್ರತ್ಯಕ್ಷವಾಗಿದೆ. ಇದರಿಂದ ಸ್ಥಳೀಯರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.ಕೆಲವು ದಿನಗಳ ಹಿಂದೆಯೇ ಇಲ್ಲಿ ಚಿರತೆ ಇದೆ ಅನ್ನೋ ಊಹೆ ಮಾತ್ರ ಇತ್ತು. ಆದ್ರೀಗ ಚಿರತೆ ಇರೋದು ಪಕ್ಕಾ ಆದಮೇಲೆ ಅರಣ್ಯ ಸಿಬ್ಬಂದಿ ಮತ್ತು ಸ್ಥಳೀಯ ಅಶೋಕ ನಗರದ ಪೊಲೀಸರು ಫುಲ್ ಅಲರ್ಟ್ ಆಗಿದ್ದಾರೆ. ಚಿರತೆಯಿಂದ ಯಾರಿಗೂ ತೊಂದರೆ ಆಗಬಾರದು ಅನ್ನುವ ಕಾರಣಕ್ಕೆ 4 ಬೋನ್ ಗಳನ್ನು ಇಟ್ಟಿದ್ದು, ಮೊನ್ನೆ ರಾತ್ರಿ ಕಾಣಿಸಿಕೊಂಡಿದ್ದ ಕೇಂದ್ರೀಯ ವಿದ್ಯಾಲಯದ ಮೈದಾನದ ತುಂಬೆಲ್ಲ ಚಿರತೆ ಓಡಾಟ ಮಾಡಿದೆ. ಹೀಗಾಗಿ‌ ಶಾಲೆಯನ್ನು ತಾತ್ಕಾಲಿಕವಾಗಿ ಬಂದ್ ಮಾಡಿ‌ ಆನಲೈನ್ ಕ್ಲಾಸ್ ನಡೆಸುವಂತೆ ಜಿಲ್ಲಾಧಿಕಾರಿ‌ ಸೂಚಿಸಿದ್ದಾರೆ.
 
 
 
ಅರಣ್ಯ ಸಿಬ್ಬಂದಿಯ ಮಾಹಿತಿ ಪ್ರಕಾರ ಚಿರತೆಗೆ ಆಹಾರದ ಕೊರತೆ ಇಲ್ಲ. ರಾತ್ರಿ ಮಾತ್ರ ಭೇಟೆಯಾಡಿ ಮತ್ತೆ ಅವಿತಿಕೊಳ್ಳುವುದರಿಂದ ಚಿರತೆ ಸೆರೆಹಿಡಿಯುವುದು ಕೊಂಚ ಕಷ್ಟವಾಗಿದೆ. ಹೀಗಾಗಿ ಹೆಚ್ಚುವರಿ ಸಿಬ್ಬಂದಿಯನ್ನ ಧಾರವಾಡದಿಂದ ನೇಮಿಸಲಾಗುತ್ತಿದ್ದು, ಅತಿಶೀಘ್ರದಲ್ಲಿ ಚಿರತೆ ಸೆರೆಹಿಡಿಯುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎನ್ನುತ್ತಾರೆ.ಒಟ್ಟಾರೆ ಸ್ಥಳೀಯ ಜನರ ನಿದ್ದೆಗೇಡಿಸಿರುವ ಈ ಚಿರತೆಯಿಂದ ಜನರು ಹೊರಬರಲು ಭಯ ಪಡುವಂತಾಗಿದೆ..ಪುಟ್ಟ ಪುಟ್ಟ ಮಕ್ಕಳು ಇರುವ ನಗರವಾಗಿದ್ದು ಆದಷ್ಟು ಬೇಗ ಚಿರತೆ ಸೆರೆಹಿಡಿದ್ರೆ ಸಾಕು ಅಂತ ಜನ ಕಾಯುತ್ತಿದ್ದಾರೆ.