ಚುನಾವಣೆ ಘೋಷಣೆ; ಡಿಸೆಂಬರ್ ನಲ್ಲಿ ನಡೆಯಲಿರುವ ಬೆಳಗಾವಿ ಅಧಿವೇಶನ ಮಿಸ್ ಮಾಡಿಕೊಳ್ಳಲಿರುವ 25 ವಿಧಾನ ಪರಿಷತ್ ಸದಸ್ಯರು

ಚುನಾವಣೆ ಘೋಷಣೆ; ಡಿಸೆಂಬರ್ ನಲ್ಲಿ ನಡೆಯಲಿರುವ ಬೆಳಗಾವಿ ಅಧಿವೇಶನ ಮಿಸ್ ಮಾಡಿಕೊಳ್ಳಲಿರುವ 25 ವಿಧಾನ ಪರಿಷತ್ ಸದಸ್ಯರು

 

ಬೆಳಗಾವಿ: ಜಿಲ್ಲೆಯಲ್ಲಿನ ಎರಡು ಸ್ಥಾನಗಳು ಸೇರಿದಂತೆ ರಾಜ್ಯದ 25 ವಿಧಾನ ಪರಿಷತ್ ಕ್ಷೇತ್ರಗಳ ಚುನಾವಣೆಗೆ ಚುನಾವಣಾ ಆಯೋಗವು ಇಂದು ದಿನಾಂಕ ಘೋಷಣೆ ಮಾಡಿರುವುದರಿಂದ, ಆಯಾ ಕ್ಷೇತ್ರಗಳ ಹಾಲಿ ಸದಸ್ಯರಿಗೆ ಡಿಸೆಂಬರ್ 13 ರಿಂದ 24 ರ ವರೆಗೆ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯಲಿರುವ ವಿಧಾನಮಂಡಲ ಅಧಿವೇಶನದ ಬಾಗಿಲು ಮುಚ್ಚಿದಂತಾಗಿದೆ.

 

25 ವಿಧಾನ ಪರಿಷತ್ ಸದಸ್ಯರ ಅವಧಿ ಡಿಸೆಂಬರ್ ನಲ್ಲಿ ಮುಗಿಯುವುದರಿಂದ ನವೆಂಬರ್ ನಲ್ಲಿಯೇ ಅಧಿವೇಶನ ನಡೆಸುವಂತೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಕಳೆದ ತಿಂಗಳಷ್ಟೇ ಮನವಿ ಮಾಡಿದ್ದರು. ಆದರೆ ಅಧಿವೇಶನವನ್ನು ಡಿಸೆಂಬರ್ ಗೆ ಮುಂದೂಡಿದ್ದರಿಂದ 25 ಸದಸ್ಯರು ಅಧಿವೇಶನದಲ್ಲಿ ಭಾಗವಹಿಸದಂತಾಗಿದೆ.

 

ರಾಜ್ಯದಲ್ಲಿನ ವಿಧಾನ ಪರಿಷತ್ತಿನ 20 ಸ್ಥಳೀಯ ಸಂಸ್ಥೆಗಳ ಕ್ಷೇತ್ರಗಳ 25 ಸ್ಥಾನಗಳಿಗೆ ಡಿಸೆಂಬರ್ 10 ರಂದು ಚುನಾವಣೆಯನ್ನು ನಿಗದಿಪಡಿಸಿ ಚುನಾವಣಾ ಆಯೋಗ ಪ್ರಕಟಣೆ ಹೊರಡಿಸಿದೆ. ನವೆಂಬರ್ 16 ರಂದು ಆಯೋಗ ನೊಟಿಫಿಕೇಶನ್ ಹೊರಡಿಸಲಿದ್ದು, ನವೆಂಬರ್ 23 ನಾಮಪತ್ರ ಸಲ್ಲಿಸಲು ಅಂತಿಮ ದಿನಾಂಕವಾಗಿದೆ. ನವೆಂಬರ್ 26 ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ. ಡಿಸೆಂಬರ್ 14 ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.

 

ಡಿಸೆಂಬರ್ 14 ರಂದು ನೂತನ ಸದಸ್ಯರು ಆಯ್ಕೆಯಾಗಲಿದ್ದು, ಅವರು 15 ರಂದು ಅಧಿವೇಶನದಲ್ಲಿ ಭಾಗವಹಿಸಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.