
ಬೆಳಗಾವಿ ಜಿಲ್ಲಾಸ್ಪತ್ರೆ ಎದುರು ಅಂಬ್ಯುಲನ್ಸ್ ಗೆ ಬೆಂಕಿ ಹಚ್ಚಿದ ಪ್ರಕರಣ; ಬಂಧಿತರಲ್ಲಿ 13 ಮಂದಿಗೆ ಕೊರೊನಾ ಇರುವ ಆಘಾತಕಾರಿ ಸಂಗತಿ ಬಯಲು
ಬೆಳಗಾವಿ: ಇಲ್ಲಿಯ ಬಿಮ್ಸ್ ಜಿಲ್ಲಾಸ್ಪತ್ರೆಯ ಆ್ಯಂಬುಲೆನ್ಸ್ ಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಪೊಲೀಸರಿಂದ ಬಂಧಿಸಲ್ಪಟ್ಟಿರುವ 22 ಮಂದಿಯಲ್ಲಿ 13 ಜನರಲ್ಲಿ ಕೊರೊನಾ ಪಾಜಿಟಿವ್ ಇರುವ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ.
ಜುಲೈ 22 ರಂದು ಜಿಲ್ಲಾಸ್ಪತ್ರೆ ಎದುರು ನಿಂತಿದ್ದ ಅಂಬುಲೆನ್ಸ್ ಗೆ ಬೆಂಕಿ ಹಚ್ಚಿದ್ದ ಕಿಡಿಗೇಡಿಗಳು ಬಳಿಕ ಕೊರೊನಾ ವಾರಿಯರ್ ಗಳಾದ ವೈದ್ಯರು, ದಾದಿಯರು ಮತ್ತು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಘಟನೆಯು ರಾಜ್ಯ ಮಟ್ಟದ ಗಮನ ಸೆಳೆದಿತ್ತು.
ಪ್ರಕರಣವನ್ನು ಗಂಭೀರವಾದ ಪರಿಗಣಿಸಿದ ಪೊಲೀಸರು ಒಟ್ಟು 22 ಮಂದಿ ಆರೋಪಿಗಳನ್ನು ಬಂಧಿಸಿದ್ದು, ಅವರಲ್ಲಿ 13 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ನ್ಯಾಯಾಂಗ ಬಂಧನಕ್ಕೆ ಕಳಿಸುವ ಮುಂಚೆ ಅವರ ಗಂಟಲು ದ್ರವದ ಮಾದರಿಗಳನ್ನು ಸಂಗ್ರಹಿಸಿ ತಪಾಸಣೆಗೆ ಕಳಿಸಿಕೊಡಲಾಗಿತ್ತು. ಭಾನುವಾರ ರಾತ್ರಿ ಬಂದಿರುವ ವರದಿಯಲ್ಲಿ ಈ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.
ಮಾಹಿತಿ ಗೊತ್ತಾದ ತಕ್ಷಣ ಅದನ್ನು ಹಿಂಡಲಗಾ ಕಾರಾಗೃಹದ ಅಧಿಕಾರಿಗಳಿಗೆ ತಿಳಿಸಲಾಯಿತು. ಜಿಲ್ಲಾಸ್ಪತ್ರೆಯ ಕೋವಿಡ್ ವಾರ್ಡಿನ ಎಲ್ಲ ಬೆಡ್ ಗಳೂ ಫುಲ್ ಆಗಿರುವುದರಿಂದ ಆರೋಪಿಗಳಿಗೆ ಎಲ್ಲಿ ಚಿಕಿತ್ಸೆ ನೀಡುವುದು ಎನ್ನುವ ಪ್ರಶ್ನೆ ಎದುರಾಗಿದೆ.
ಆರೋಪಿಗಳನ್ನು ಬಂಧಿಸುವ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೂ ಈಗ ಆತಂಕ ಶುರುವಾಗಿದೆ. ಸೋಂಕಿತ ಆರೋಪಿಗಳ ಸಂಪರ್ಕದಲ್ಲಿ ಬಂದಿರುವ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗುತ್ತಿದೆ. ಅವರೆಲ್ಲರ ತಪಾಸಣೆ ನಡೆಯಲಿದೆ. ಎಪಿಎಂಸಿ ಪೊಲೀಸ್ ಠಾಣೆಯನ್ನೂ ಸೀಲ್ ಡೌನ್ ಮಾಡಲಾಗುತ್ತಿದೆ.
ನಿನ್ನೆ ಬಂಧಿಸಲಾಗಿರುವ 7 ಆರೋಪಿಗಳ ಸ್ವ್ಯಾಬ್ ವರದಿ ಇನ್ನೂ ಬರಬೇಕಾಗಿದೆ.